ಜಿಲ್ಲೆ

ಗ್ರಾಮೀಣ ಬಸ್ ನಿಲ್ದಾಣಗಳು ಚಕಾಚಕ್!

ಉತ್ತರ ಕನ್ನಡ ಡೆಸ್ಕ್

ಶಿರಸಿ: ವಾಟ್ಸ್‌ಆ್ಯಪ್ ಕೇವಲ ಮನರಂಜನೆಗೆ ಅಲ್ಲ, ಸರಿಯಾಗಿ ಬಳಸಿಕೊಂಡರೆ ವಾಟ್ಸ್‌ಆ್ಯಪ್ ಸಂದೇಶಗಳ ಮೂಲಕ ಅಭಿವೃದ್ಧಿ ಕೆಲಸ ಮಾಡಬಹುದು ಎಂದು ತಾಲೂಕಿನ ಗ್ರಾಪಂಗಳ ನೂತನ ಅಧ್ಯಕ್ಷ-ಉಪಾಧ್ಯಕ್ಷರು ಹಾಗೂ ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ.

ತಾಲೂಕಿನಲ್ಲಿ ಕೇವಲ 24 ಗಂಟೆಯೊಳಗೆ 32ಕ್ಕೂ ಅಧಿಕ ಗ್ರಾಮೀಣ ಬಸ್ ಪ್ರಯಾಣಿಕರ ತಂಗುದಾಣಗಳು ಸ್ವಚ್ಛಗೊಂಡು ನಳನಳಿಸುವಂತಾಗಿವೆ. ಈವರೆಗೆ ಒಂದೇ ಒಂದು ಕಸಬರಿಗೆಯನ್ನೂ ಕಾಣದ ಹಳ್ಳಿ ಭಾಗದ ಅನೇಕ ಬಸ್ ನಿಲ್ದಾಣಗಳಲ್ಲಿ ಈಗ ಹುಡುಕಿದರೂ ಕಸ ಸಿಗದು. ಇದಕ್ಕೆ ಕಾರಣವಾಗಿದ್ದು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ ಒಂದು ಸಂದೇಶ.

ಪ್ರಯಾಣಿಕರೂ ಕೂರುವುದು ಇರಲಿ, ಹತಿತ್ತರವೂ ನಿಲ್ಲದಷ್ಟು ಗಲೀಜಾಗಿದ್ದ ಅನೇಕ ಬಸ್ ನಿಲ್ದಾಣಗಳು ಈಗ ಸ್ವಚ್ಛವಾಗಿವೆ. ಆಯಾ ಗ್ರಾಮ ಪಂಚಾಯಿತಿಗಳ ಸಿಬ್ಬಂದಿ, ಅಧಿಕಾರಿಗಳ ನೇತೃತ್ವದಲ್ಲಿ, ಹೊಸ ಅಧ್ಯಕ್ಷರ-ಉಪಾಧ್ಯಕ್ಷರ ತಂಡಗಳ ಮೇಲುಸ್ತುವಾರಿಯಲ್ಲಿ ನಿಲ್ದಾಣಗಳು ಹೊಸ ರೂಪ ಪಡೆಯುತ್ತಿವೆ.
ಏನಿದು ಕಮಾಲ್?: ಕಳೆದ ಆ. 7ರಂದು ತಾಲೂಕು ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ನಡೆಸಿದ್ದ ಶಾಸಕ ಭೀಮಣ್ಣ ನಾಯ್ಕ ಅವರು ಒಂದು ಸೂಚನೆ ನೀಡಿದ್ದರು. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಇರಬೇಕು. ಈ ಕೆಲಸವನ್ನು ಗ್ರಾಪಂನವರೇ ಮಾಡಬೇಕು ಎಂದು ಹೇಳಿದ್ದರು.

ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕು ಪಂಚಾಯಿತಿ ನೂತನ ಪ್ರಭಾರಿ ಕಾರ್ಯನಿರ್ವಹಣಾ ಅಧಿಕಾರಿ ಸತೀಶ ಹೆಗಡೆ ಅವರು ಬುಧವಾರ ಸಂಜೆ ಪಿಡಿಒಗಳ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಒಂದು ಸಂದೇಶ ಹಾಕಿ ಆ. 24ರೊಳಗೆ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲ ಬಸ್ ನಿಲ್ದಾಣಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಇರುವ ಒಣ ಕಸ ವಿಲೇವಾರಿಯನ್ನು ಸಿಬ್ಬಂದಿ ಹಾಗೂ ಪಂಚಾಯಿತಿ ನೌಕರರು, ಜನಪ್ರತಿನಿಧಿಗಳ ಮಾರ್ಗದರ್ಶನದಲ್ಲಿ ಒಂದು ಅಭಿಯಾನದ ಮಾದರಿಯಲ್ಲಿ ನಡೆಸಬೇಕೆಂದು ಕೋರಿದ್ದರು.

ಸ್ವತಃ ಜನಪ್ರತಿನಿಧಿಗಳು, ಪಂಚಾಯಿತಿ ಸಿಬಂದಿ ತೊಡಗಿಕೊಂಡಿದ್ದನ್ನು ನೋಡಿದ ಹಳ್ಳಿ ಭಾಗದ ಜನರೂ ಸ್ವಚ್ಛತಾ ಅಭಿಯಾನದಲ್ಲಿ ಕೈ ಜೋಡಿಸಿದ್ದು ವಿಶೇಷ. ಇದೊಂದು ಮಾದರಿ ಅಭಿಯಾನವಾಗಿ ನಿರಂತರವಾಗಿರುವಂತೆ ತಾವು ಕೂಡ ಸಹಕಾರ ನೀಡುವುದಾಗಿ ಕೆಲವು ಗ್ರಾಮಸ್ಥರು ವಾಗ್ದಾನ ಮಾಡಿದ್ದಾರೆ. ಗುರುವಾರ ಆರಂಭವಾದ ಈ ಸ್ವಚ್ಛತಾ ಅಭಿಯಾನ ಪ್ರಥಮ ಹಂತದಲ್ಲಿ ಆ.23ರ ತನಕ ನಡೆಯಲಿದೆ.

ನನ್ನ ಕ್ಷೇತ್ರ ಸ್ವಚ್ಛ ಕ್ಷೇತ್ರ ಆಗಬೇಕು ಎಂಬ ಕನಸು ನನ್ನದು. ಹೀಗಾಗಿ ಪಿಡಿಒಗಳ ಸಭೆ ಕೂಡ ನಡೆಸಿದ್ದೆ. ಬಸ್ ನಿಲ್ದಾಣಗಳಿಂದ ಈ ಕೆಲಸ ಆರಂಭವಾಗಿದೆ. ಇದು ನಿರಂತರ ಅಭಿಯಾನವಾಗಿ ಮುಂದುವರಿಯಲಿ. ಭೀಮಣ್ಣ ನಾಯ್ಕ, ಶಾಸಕ