ಸಿದ್ದಾಪುರ:
ಬೆಟ್ಟ, ಗುಡ್ಡ, ಅರಣ್ಯ ಪ್ರದೇಶಗಳಿಂದ ಕೂಡಿರುವ ಕೊಡಗಿನಲ್ಲಿ ಈಗಲೂ ಖಾಸಗಿ ಬಸ್ ಮತ್ತು ಇತರ ಖಾಸಗಿ ವಾಹನಗಳೇ ಜನಸಾಮಾನ್ಯರಿಗೆ ಪ್ರಮುಖ ಸಾರಿಗೆ ಸಂಪರ್ಕ ಮಾಧ್ಯಮಗಳಾಗಿವೆ. ಜಿಲ್ಲೆಯ ಗ್ರಾಮೀಣ ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸುವಂತೆ ದಶಕಗಳಿಂದಲೂ ಬೇಡಿಕೆ ಇಡುತ್ತಾ ಬಂದಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಇನ್ನೂ ಮೌನವಾಗಿಯೇ ಇದ್ದಾರೆ. ಅದರಲ್ಲೂ ಕೊಡಗಿನ ಗಡಿ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ತೀರಾ ದುರ್ಬಲವಾಗಿದ್ದು, ಇಲ್ಲಿಯ ನಿವಾಸಿಗಳ ಸಂಕಷ್ಟಕ್ಕೆ ಧ್ವನಿಯಾಗುವವರೇ ಇಲ್ಲವಾಗಿದೆ. ಇದರಿಂದಾಗಿ ಈ ಭಾಗದ ಆರ್ಥಿಕ ಪರಿಸ್ಥಿತಿ ಮೇಲೆ ಹೊಡೆತ ಬಿದ್ದಿರುವುದಲ್ಲದೆ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳೂ ಕುಂಠಿತವಾಗಿರುವ ಮಾತುಗಳು ಕೇಳಿಬರುತ್ತಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಂದ ಪ್ರತಿನಿತ್ಯ ಒಂದೇ ಮಾರ್ಗದಲ್ಲಿ ಸಂಚರಿಸುವವರಿಗೆ ಸರ್ಕಾರ ಪಾಸ್ ವ್ಯವಸ್ಥೆ ಮಾಡಿದೆ. ಆದರೆ ವಿದ್ಯಾರ್ಥಿಗಳು ಮತ್ತು ಉದ್ಯೋಗಸ್ಥರು ಹೆಚ್ಚಾಗಿ ಸಂಚರಿಸುವ ಮಾರ್ಗಗಳಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಅವಶ್ಯಕತೆಗೆ ತಕ್ಕ ಪ್ರಮಾಣದಲ್ಲಿ ಇಲ್ಲ. ಇದ್ದರೂ ಸಮಯಕ್ಕೆ ಸರಿಯಾಗಿ ಓಡುವುದಿಲ್ಲ. ಇದರಿಂದಾಗಿ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಿಂದಲೂ ಕೊಡಗಿನ ಗ್ರಾಮೀಣ ಪ್ರದೇಶದ ಮಹಿಳಾ ಪ್ರಯಾಣಿಕರು ವಂಚಿತರಾಗಿದ್ದಾರೆ.
ಕೇರಳ ಗಡಿಯಲ್ಲಿರುವ ಕರಿಕೆ, ಮೈಸೂರು ಗಡಿಯಲ್ಲಿರುವ ಮಾಲ್ದಾರೆ ಸೇರಿದಂತೆ ಅಂತಾರಾಜ್ಯ ಮತ್ತು ಅಂತರ್ ಜಿಲ್ಲಾ ಗಡಿಭಾಗದಲ್ಲಿ ಸರ್ಕಾರಿ ಬಸ್‌ಗಳ ಸಮಸ್ಯೆ ದೊಡ್ಡದಾಗಿ ಕಾಡುತ್ತಿದೆ. ಶಿಕ್ಷಣ, ಉದ್ಯೋಗ, ವ್ಯವಹಾರ, ಕೃಷಿ ಸೇರಿದಂತೆ ವಿವಿಧ ಕಾರಣಗಳಿಂದ ಗಡಿಯಿಂದಾಚೆಗೆ ಹೆಚ್ಚಿನವರು ಸಂಪರ್ಕ ಇಟ್ಟುಕೊಂಡಿರುತ್ತಾರೆ. ಅತ್ತ ಕಡೆಯಿಂದಲೂ ಈ ಕಡೆ ಬರುವವರು ಇರುತ್ತಾರೆ. ಆದರೆ ಇಲ್ಲಿಯೂ ಸೂಕ್ತ ಪ್ರಮಾಣದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆ ಆಗಿದೆ.
ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮದ ಸರ್ಕಾರಿ ಶಾಲೆಗೆ ಪಕ್ಕದ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬರುತ್ತಾರೆ. ಇಲ್ಲಿನ ಕಾಫಿ ತೋಟಗಳಿಗೂ ಅತ್ತ ಕಡೆಯಿಂದ ಕಾರ್ಮಿಕರು ಆಗಮಿಸುತ್ತಾರೆ. ಆದರೆ ಸರ್ಕಾರಿ ಬಸ್‌ಗಳ ಓಡಾಟ ಕಡಿಮೆ ಇದೆ. ಇದರಿಂದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಸಂಜೆ ೪ ಗಂಟೆಗೆ ಶಾಲೆ ಬಿಟ್ಟರೆ ಬಸ್ ಇರುವುದು ೫.೩೦ರ ನಂತರ. ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ಶಾಲೆ ಬಿಟ್ಟರೂ ಬಸ್‌ಗಾಗಿ ಸಂಜೆ ೫.೩೦ರ ತನಕ ಕಾಯಲೇಬೇಕು. ಸುತ್ತಲೂ ಅರಣ್ಯ ಇರುವ ಮಾಲ್ದಾರೆಯಲ್ಲಿ ಹಗಲಿನ ವೇಳೆಯೇ ಕಾಡಾನೆಗಳು ಸುತ್ತಾಡುವುದು ಸಾಮಾನ್ಯ. ಪಕ್ಕದ ದುಬಾರೆ ಕಾಡಿನಲ್ಲಿರುವ ಹುಲಿ, ಕಾಡೆಮ್ಮೆಗಳು ಆಗಾಗ್ಗೆ ದರ್ಶನ ಕೊಡುತ್ತಿರುತ್ತವೆ. ಇಂಥ ಭಯದ ವಾತಾವರಣದಲ್ಲೇ ವಿದ್ಯಾರ್ಥಿಗಳು ಬಸ್‌ಗಾಗಿ ಕಾಯಬೇಕು. ಒಂದೊಮ್ಮೆ ೫.೩೦ರ ಬಸ್ ಇಲ್ಲದಿದ್ದರೆ ಮನೆಯಲ್ಲಿರುವ ಪೋಷಕರನ ಪಾಡು ಅನುಭವಿಸಿವರಿಗಷ್ಟೇ ಗೊತ್ತು ಎನ್ನುವ ಕಳಕಳಿ ಸ್ಥಳೀಯರದ್ದು.
ಮಾಲ್ದಾರೆಯ ಇಂಥ ಸ್ಥಿತಿ ಕೊಡಗಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಸರ್ಕಾರ ಕೂಡಲೇ ಇಂಥ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಬೇಕು ಎನ್ನುವುದು ಸ್ಥಳೀಯರ ಒತ್ತಾಯ. ತಪ್ಪಿದಲ್ಲಿ ಸರ್ಕಾರಿ ಬಸ್ ಸೇವೆಯಿಂದ ವಂಚಿತರಾದವರು ಸಂಘಟಿತರಾಗಿ ಹೋರಾಟದ ತೀರ್ಮಾನ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಮಾತು ಕೂಡ ಕೇಳಿ ಬರುತ್ತಿದೆ.
ಮಾಲ್ದಾರೆ ಸುತ್ತಮುತ್ತಲ ಭಾಗದಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದಿರುವ ಬಗ್ಗೆ ಕಾರ್ಮಿಕರು, ವಿದ್ಯಾರ್ಥಿಗಳು, ಸಾರ್ವಜನಿಕರು ಗ್ರಾಮ ಸಭೆಯಲ್ಲಿ ಮನವಿ ಮಾಡಿದ್ದರು. ಪಂಚಾಯಿತಿ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಕೂಡಲೇ ಬಸ್ ವ್ಯವಸ್ಥೆ ಒದಗಿಸುವಂತಾಗಬೇಕು.
ಸಮೀರ್, ಮಾಜಿ ಅಧ್ಯಕ್ಷ, ಮಾಲ್ದಾರೆ ಗ್ರಾಮ ಪಂಚಾಯಿತಿ
ಮಾಲ್ದಾರೆ ಭಾಗದಲ್ಲಿ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು, ಸಾರ್ವಜನಿಕರು ಸಮೀಪದ ಊರುಗಳಿಗೆ ತೆರಳಲು ಖಾಸಗಿ ಜೀಪ್, ಆಟೋಗಳನ್ನು ನೆಚ್ಚಿಕೊಳ್ಳುವಂತಾಗಿದೆ. ಇದರಿಂದ ಹಲವು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಕಷ್ಟವಾಗುತ್ತಿದೆ. ಈ ಭಾಗದ ಮಹಿಳೆಯರು ಸರ್ಕಾರದ ಶಕ್ತಿ ಯೋಜನೆಯಿಂದ ವಂಚಿತರಾಗಿದ್ದಾರೆ.
ಪುಷ್ಪಾ ಟಿ.ಎಸ್., ಸಮುದಾಯ ಸಂಪನ್ಮೂಲ ವ್ಯಕ್ತಿ, ಸಂಜೀವಿನಿ ಒಕ್ಕೂಟ, ಮಾಲ್ದಾರೆ
ಸರ್ಕಾರದ ಬಸ್ ಸೇವೆ ಚಾಲ್ತಿಯಲ್ಲಿದ್ದರೂ ನಮ್ಮ ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯ ಇಲ್ಲ. ಬಸ್ ವ್ಯವಸ್ಥೆ ಮಾಡುವಂತೆ ನಮ್ಮೂರಿನಲ್ಲಿ ಸಹಿ ಸಂಗ್ರಹಿಸಿ ಪಿರಿಯಾಪಟ್ಟಣ, ಮಡಿಕೇರಿ ಬಸ್ ಡಿಪೋ ಮ್ಯಾನೇಜರ್ ಬಳಿ ನೀಡಿದ್ದರೂ ಪ್ರಯೋಜವಾಗಿಲ್ಲ. ಪ್ರತಿನಿತ್ಯ ಸಂಚರಿಸುವವರಿಗೆ ಖಾಸಗಿ ಬಸ್ ಅಥವಾ ವಾಹನಗಳಲ್ಲಿ ಸಂಚರಿಸುವುದು ಆರ್ಥಿಕವಾಗಿ ಕಷ್ಟದ ಕೆಲಸ. ವಿದ್ಯಾರ್ಥಿಗಳಿಗೂ ಶಾಲೆಗೆ ತೆರಳಲು ಸಮಸ್ಯೆ ಆಗುತ್ತಿದೆ.
ಹನೀಫ್, ಗ್ರಾಪಂ ಸದಸ್ಯ, ಮಾಲ್ದಾರೆ
ಪಿರಿಯಾಪಟ್ಟಣ ತಾಲೂಕಿನ ಮುತ್ತೂರು, ಲಿಂಗಪುರ ಸೇರಿ ಇತರ ಗ್ರಾಮಗಳಿಂದ ಮಾಲ್ದಾರೆ ಶಾಲೆಗೆ ಬರುವ ಮಕ್ಕಳಿಗೆ ದಿನನಿತ್ಯ ಬಸ್‌ಗಾಗಿ ಕಾಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪಿರಿಯಾಪಟ್ಟಣದಲ್ಲಿ ಕೆಎಸ್ಸಾರ್ಟಿಸಿ ಬಸ್ ಡಿಪೋ ಇದೆ. ಮಾಲ್ದಾರೆಯಿಂದ ಸುಮಾರು ೨೫ ಕಿಮೀ ದೂರವಿದ್ದರೂ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಿಲು ಬಸ್ ಸಂಚಾರಕ್ಕಾಗಿ ಬೇಡಿಕೆ ಇಟ್ಟು ಪಂಚಾಯಿತಿ ಮೂಲಕ ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈತನಕ ಯಾವುದೇ ಪ್ರಯೋಜನವಾಗಿಲ್ಲ.
ಬಾವ ಮಾಲ್ದಾರೆ, ಅಧ್ಯಕ್ಷ, ಜನಪರ ಸಂಘಟನೆ
ಸುಮಾರು ೧೯ ವರ್ಷದಿಂದ ಮಾಲ್ದಾರೆ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಈ ಭಾಗದಲ್ಲಿ ಬಸ್ ಸೌಲಭ್ಯವಿಲ್ಲದೆ ಪ್ರತಿನಿತ್ಯ ಖಾಸಗಿ ವಾಹನಗಳನ್ನು ಅವಲಂಭಿಸುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರವನ್ನು ಹೆಚ್ಚಿಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ. ಮಕ್ಕಳ ಶಿಕ್ಷಣಕ್ಕೂ ಸಹಕಾರಿ ಆಗಲಿದೆ.
ಸೋನಿ, ಶಿಕ್ಷಕಿ, ಮಾಲ್ದಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ನಾವುಗಳು ಕೊಡಗು ಗಡಿಯಲ್ಲಿರುವ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಮುತ್ತೂರು ಗ್ರಾಮದಿಂದ ಮಾಲ್ದಾರೆ ಶಾಲೆಗೆ ಬರುತಿದ್ದು, ಸಂಜೆ ೪ ಗಂಟೆಗೆ ಶಾಲೆ ಬಿಟ್ಟರೂ ಬಸ್‌ಗಳ ಸೌಲಭ್ಯವಿಲ್ಲದೆ ರಾತ್ರಿ ಮನೆ ತಲುಪುವ ಪರಿಸ್ಥಿತಿ ಇದೆ. ಆದಷ್ಟು ಬೇಗ ನಮಗೆ ಶಾಲೆ ಬಿಡುವ ಸಮಯಕ್ಕೆ ಬಸ್ ಸೌಲಭ್ಯ ಕಲ್ಪಿಸಿಕೊಟ್ಟಲ್ಲಿ ನಮ್ಮಂಥ ಬಡ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ.
ಚಿರಂಜೀವಿ, ವಿದ್ಯಾರ್ಥಿ, ಮುತ್ತೂರು ಗ್ರಾಮ
ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಕಡಿಮೆ ಇರುವುದರಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಈ ಭಾಗದ ಮಹಿಳೆಯರಿಗೆ ಸಾಧ್ಯವಾಗುತ್ತಿಲ್ಲ ಆದಷ್ಟು ಬೇಘ ಈ ಭಾಗಕ್ಕೆ ಬಸ್ ಮಾರ್ಗ ಹೆಚ್ಚಿಸಬೇಕು. ಇಲ್ಲಿದ್ದರೆ ವಿವಿಧ ಸಂಘಟನೆಗಳ ಸಹಕಾರದಿಂದ ಹೋರಾಟದ ದಾರಿ ಹಿಡಿಯಬೇಕಾಗಬಹುದು.
ಮಾಲತಿ, ಅಧ್ಯಕ್ಷೆ, ಮಾಲ್ದಾರೆ ಗ್ರಾಮ ಪಂಚಾಯಿತಿ
ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ಶಾಲೆ ಬಿಟ್ಟರೆ ಆ ಹೊತ್ತಿಗೆ ಬಸ್ ಸೌಲಭ್ಯ ಇರುವುದಿಲ್ಲ. ಸಂಜೆ ೫.೩೦ರ ತನಕ ಮಾಲ್ದಾರೆ ಬಸ್ ಸ್ಟಾಪ್‌ನಲ್ಲಿ ಕಾಯಬೇಕಾದ ಪರಿಸ್ಥಿತಿ ಇದೆ. ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ಸಮಯಕ್ಕೆ ಸರಿಯಾಗಿ ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಪ್ರಾರಂಭಿಸಬೇಕು. ಈ ಭಾಗದಲ್ಲಿ ಹಗಲಿನಲ್ಲೂ ಕಾಡಾನೆಗಳ ಓಡಾಟ ಇರುವುದರಿಂದ ವಿದ್ಯಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ಬಸ್‌ಗೆ ಕಾಯಬೇಕಾದ ಸ್ಥಿತಿ ನಮ್ಮದು.
ನಂದಿತಾ, ವಿದ್ಯಾರ್ಥಿನಿ, ಮಾಲ್ದಾರೆ
ಪ್ರತಿನಿತ್ಯ ಕಾಡು ಪ್ರಾಣಿಗಳ ಭಯದ ನಡುವೆ ೩ ಕಿ.ಮೀ ಸಂಚರಿಸಿ ಮಾಲ್ದಾರೆ ಪಟ್ಟಣ ತಲುಪಬೇಕಾಗಿದೆ. ನಂತರ ಸರ್ಕಾರಿ ಬಸ್ ಕಾಯುವ ಪರಿಸ್ಥಿತಿ. ಸಮಯಕ್ಕೆ ಸರಿಯಾಗಿ ಬಸ್ ಬಾರದೆ ದೂರದ ಊರುಗಳಾದ ವಿರಾಜಪೇಟೆ, ಗೋಣಿಕೊಪ್ಪ, ಮಡಿಕೇರಿ, ಕಾಲೇಜುಗಳಿಗೆ ತೆರಳಲು ಈ ಭಾಗದ ವಿದ್ಯಾರ್ಥಿಗಳಿಗೆ ತುಂಬಾ ಕಷ್ಟವಾಗುತ್ತಿದೆ. ಸುತ್ತಮುತ್ತಲಿನ ವಿದ್ಯಾರ್ಥಿಗಳು ಸಹಿ ಸಂಗ್ರಹಿಸಿ ಅಧಿಕಾರಿಗಳಿಗೆ ನೀಡಿದರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಕಿರಣ್ ಕುಮಾರ್, ಆದಿವಾಸಿ ಮುಖಂಡ
ಸಿದ್ದಾಪುರ ಮತ್ತು ಪಿರಿಯಾಪಟ್ಟಣ ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸುವ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಆದಷ್ಟು ಬೇಗ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತದೆ.
ದರ್ಶನ್ ರಾಮಚಂದ್, ಡಿಪೋ ವ್ಯವಸ್ಥಾಪಕ, ಪಿರಿಯಾಪಟ್ಟಣ