ತುಮಕೂರು: ಜಿಲ್ಲೆಯಲ್ಲಿ ಮತ್ತೊಂದು ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಗ್ರಾಮೀಣ ಪ್ರದೇಶಕ್ಕೂ ಮಹಾಮಾರಿ ಪ್ರವೇಶಕೊಟ್ಟಿದೆ.
ಮಾಗಡಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಚಾಲಕನಾಗಿರುವ ತುಮಕೂರು ತಾಲೂಕು ಬೆಳ್ಳಾವಿ ಸಮೀಪದ ಮಾವಿನಕುಂಟೆಯ 35 ವರ್ಷದ ಪಿ.2135ಗೆ ಸೋಂಕು ದೃಢವಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 27ಕ್ಕೆ ಜಿಗಿದಿದೆ.
ಕೆಎಸ್‌ಆರ್‌ಟಿಸಿ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಕೆಲಸಕ್ಕೆ ತೆರಳಲು ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾಗಿದ್ದ ಚಾಲಕನಿಗೆ ಸೋಂಕು ದೃಢವಾಗಿರುವುದು ಗ್ರಾಮಸ್ಥರಿಗೆ ಆಶ್ಚರ್ಯದ ಜತೆ ಭಯವನ್ನೂ ತಂದಿದೆ. ಪರೀಕ್ಷಾ ವರದಿಗೂ ಮುಂಚೆಯೇ ಚಾಲಕನಿಗೆ ಕೆಲಸ ನೀಡಿದ್ದ ಮಾಗಡಿ ಘಟಕದಲ್ಲಿಯೂ ಆತಂಕ ಎದುರಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನೆಲ್ಲ ಕ್ವಾರಂಟೈನ್ ಮಾಡಲಾಗಿದೆ.
ಲಾಕ್‌ಡೌನ್ ಸಮಯದಲ್ಲಿ ಗ್ರಾಮದಲ್ಲಿ ಹಾಗೂ ಕಳೆದೈದು ದಿನದಿಂದ ಡಿಪೋದಲ್ಲಿ ಸಾಕಷ್ಟು ಜನರ ಜತೆ ಒಡನಾಟ ನಡೆಸಿರುವ ಚಾಲಕನಿಗೆ ಸೋಂಕು ಹೇಗೆ ತಗುಲಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮಾಗಡಿಯಲ್ಲಿ ದೃಢವಾಗಿದ್ದರೂ ಸೋಂಕಿತ ವಿಳಾಸದ ಆಧಾರದ ಮೇಲೆ ತುಮಕೂರು ಜಿಲ್ಲೆ ಪಟ್ಟಿಗೆ ಹೆಸರು ಸೇರಿಸಲಾಗಿದೆ. ಸೋಂಕಿತ ವ್ಯಕ್ತಿಯ ಸ್ವಗ್ರಾಮ ಮಾವಿನಕುಂಟೆ ಕಂಟೇನ್ಮೆಂಟ್ ವಲಯ ಎಂದು ಘೋಷಿತವಾಗಿದೆ.
ಊರಿಗೊಂದೇ ಅಂಗಡಿ ಅದು ಪಿ.2135 ಸೋಂಕಿತನದ್ದು!: ಮಾವಿನಕುಂಟೆಯಲ್ಲಿ ಅಗತ್ಯ ವಸ್ತುಗಳಿಗೆ ಇರುವುದು ಒಂದೇ ಅಂಗಡಿಯಾಗಿದ್ದು, ಅದು ಕರೊನಾ ಸೋಂಕು ದೃಢವಾಗಿರುವ ಪಿ.2135 ಅವರದ್ದು. ಮಾಗಡಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಉದ್ಯೋಗದಲ್ಲಿದ್ದ ಇವರು ಊರಿನಿಂದಲೇ ಓಡಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಮುಂಬೈಗೆ ವಾಪಸ್ ಕಳುಹಿಸುವ ಕಾರ್ಯಾಚರಣೆಯಲ್ಲಿ ಇವರು ಕೆಲಸ ಮಾಡಿದ್ದರು ಎಂದು ತಿಳಿದುಬಂದಿದ್ದು, ಅಲ್ಲಿಯೇ ಸೋಂಕು ತಗುಲಿರುವ ಸಾಧ್ಯತೆಯಿದೆ. ಇನ್ನೂ ಊರಿನ ಬಹುತೇಕರು ಇವರ ಅಂಗಡಿಯಲ್ಲಿ ವಸ್ತುಗಳ ಖರೀದಿಗೆ ಹೋಗಿ ಬಂದವರಿದ್ದಾರೆ. ರಜೆ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಇದ್ದ ಪಿ.2135 ಸಾಕಷ್ಟು ದಿನ ಜನರೊಂದಿಗೆ ತಾವೆ ವ್ಯವಹರಿಸಿದ್ದು ಗ್ರಾಮಸ್ಥರ ನೆದ್ದೆಕೆಡಿಸಿದೆ.
ತುಮಕೂರಿನಲ್ಲಿ ಅಂತ್ಯಕ್ರಿಯೆ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕಳೆದ ಶನಿವಾರ ದಾಖಲಾಗಿ ಕರೊನಾ ಸೋಂಕು ದೃಢವಾಗಿದ್ದ ನೆಲಮಂಗಲ ತಾಲೂಕು ವೀರಸಾಗರದ ಪಿ.1686 55 ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಮೃತಪಟ್ಟರು. ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಸೋಮವಾರ ಮಹಿಳೆಯ ಅಂತ್ಯಕ್ರಿಯೆ ತುಮಕೂರಿನಲ್ಲಿ ನಡೆಯಿತು. ಮಹಿಳೆಗೆ ಈ ಹಿಂದೆ ಕ್ಷಯ ರೋಗವೂ ಇತ್ತು. ಸತತ ಎರಡು ದಿನ ವೆಂಟಿಲೇಟರ್‌ನಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತಾದರೂ ಬದುಕಲಿಲ್ಲ. ಮಹಿಳೆಯ ಕುಟುಂಬದ ಸದಸ್ಯರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ವೀರಸಾಗರವನ್ನು ಕಂಟೇನ್‌ಮೆಂಟ್ ವಲಯವಾಗಿ ಪರಿವರ್ತನೆ ಮಾಡಿ ಬೆಂ.ಗ್ರಾಮಾಂತರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಊರಿಗೆ ಕಳುಹಿಸುವಂತೆ ಕಾರ್ಮಿಕರ ಪಟ್ಟು: ದಾಬಸ್‌ಪೇಟೆ: ದಾಬಸ್‌ಪೇಟೆ ಠಾಣೆ, ಪ್ರಾಥಮಿಕ ಕೇಂದ್ರದ ಮುಂದೆ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಹೊರರಾಜ್ಯದ ವಲಸೆ ಕಾರ್ಮಿಕರು ಜಮಾವಣೆಗೊಂಡು ನಮ್ಮನ್ನು ನಮ್ಮ ರಾಜ್ಯಕ್ಕೆ ಕಳಿಸುವಂತೆ ಆಗ್ರಹಿಸಿದರು. ಬಿಹಾರ ಮೂಲದ ಜಾರ್ಖಂಡ್ 65, ಬಿಹಾರ 150, ಓಡಿಸ್ಸಾ 12 ಕಾರ್ಮಿಕರನ್ನು ದಾಬಸ್‌ಪೇಟೆ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿ ನಂತರ ಸಾರಿಗೆ ಬಸ್ ಟಿಕೆಟ್ ನೀಡಿ ಬೆಂಗಳೂರಿನ ಚಿಕ್ಕಾಬಣಾವರ ರೈಲು ನಿಲ್ದಾಣ, ಬೆಂಗಳೂರಿನ ಕಂಟೋನ್‌ಮೆಂಟ್ ರೈಲು ನಿಲ್ದಾಣಕ್ಕೆ ಕಳಿಸಿಕೊಡಲಾಯಿತು.