ಜಿಲ್ಲೆ

ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಓಡಿಸಿ

ಹಾನಗಲ್ಲ: ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಬಸ್ ಮಾರ್ಗದ ಸಮಯ ನಿಗದಿಪಡಿಸಬೇಕು ಎಂದು ವಾಕರಸಾ ಸಂಸ್ಥೆ ಅಧಿಕಾರಿಗಳಿಗೆ ಶಾಸಕ ಶ್ರೀನಿವಾಸ ಮಾನೆ ಸೂಚಿಸಿದರು.

ಹಾವೇರಿ ಜಿಲ್ಲೆ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಬೇಜವಾಬ್ದಾರಿಯಿಂದ ವರ್ತಿಸುವವರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ಚಿಕ್ಕಾಂಶಿ ಹೊಸೂರು ಗ್ರಾಮದ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆ ಮಾಡದೇ ಹೊರಗಡೆ ನಿಲುಗಡೆ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಹಾನಗಲ್ಲ, ಹಾವೇರಿ ಮಾರ್ಗದಲ್ಲಿ ಸಂಚರಿಸುವ ಒಂದು ಬಸ್ ಅನ್ನು ವರ್ದಿ, ನರೇಗಲ್, ಕಂಚಿನೆಗಳೂರು, ಕಾಲ್ವೆಕಲ್ಲಾಪುರ ಮಾರ್ಗವಾಗಿ ಓಡಿಸುವಂತೆ ಸೂಚಿಸಿದರು. ಶೀಘ್ರ ಹೊಸ ಬಸ್​ಗಳು ಹಾನಗಲ್ ಘಟಕಕ್ಕೆ ಬರಲಿವೆ ಎಂದರು.

ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ, ಘಟಕ ವ್ಯವಸ್ಥಾಪಕ ಜಾಧವ ಇತರರಿದ್ದರು.