ಲೋಕಾಪುರ: ಪಟ್ಟಣದಿಂದ ಬಾಗಲಕೋಟೆವರೆಗೆ ಸರಕು ಸಾಗಣೆ ರೈಲು ಓಡಿಸಲು ಮಾತ್ರ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದ್ದಕ್ಕೆ ರಾಜ್ಯ ರೈಲ್ವೆ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ಗೂಡ್ಸ್ ಬದಲು ಪ್ರಯಾಣಿಕರ ರೈಲು ಓಡಿಸುವಂತೆ ಸಮಿತಿ ಅಧ್ಯಕ್ಷ ಕುತುಬುದ್ದಿನ್ ಖಾಜಿ ಒತ್ತಾಯಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಪುರ-ಬಾಗಲಕೋಟೆ ನೂತನ ರೈಲು ಮಾರ್ಗದ ಭದ್ರತಾ ಸಮೀಕ್ಷೆ ನಡೆಸಿ 120ಕಿ.ಮೀ. ವೇಗದಲ್ಲಿ ಪ್ರಾಯೋಗಿಕವಾಗಿ ರೈಲು ಓಡಿಸಲಾಗಿದೆ. ಅದು ಯಶಸ್ವಿಯಾಗಿದ್ದರಿಂದ ಈಗ ಸರಕು ಸಾಗಣೆ ರೈಲಿಗೆ ಮಾತ್ರ ಅನುಮತಿ ನೀಡಿದ್ದು ಸರಿಯಲ್ಲ. ಈಗಾಗಲೇ ರೈಲ್ವೆ ಇಲಾಖೆಗೆ ಪ್ಯಾಸೆಂಜರ್ ರೈಲು ಓಡಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಬೆಂಬಲದೊಂದಿಗೆ ಪಕ್ಷಾತೀತ ಹೋರಾಟ ಮಾಡಲಾಗುವುದು ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಲೋಕಾಪುರದಿಂದ ಬಾಗಲಕೋಟೆವರೆಗೆ ಪ್ರಥಮವಾಗಿ ಪ್ಯಾಸೆಂಜರ್ ರೈಲು ಓಡಿಸುವಂತೆ ಪಟ್ಟಣದ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗುರುರಾಜ ಉದಪುಡಿ, ಬಾಗಲಕೋಟೆ ಜಿಲ್ಲಾ ರೈತ ಮುಖಂಡ ಸುಭಾಸ ಶಿರಬೂರ, ಮುತ್ತಪ್ಪ ಕೋಮಾರ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.