ಹುಬ್ಬಳ್ಳಿ: ಇಲ್ಲಿಯ ಕೇಶ್ವಾಪುರದ ಐಸಿಎಐ ಭವನದಲ್ಲಿ ಭಾನುವಾರ ಲೆಕ್ಕ ಪರಿಶೋಧಕರ ಸಂಸ್ಥೆಯು 75 ವರ್ಷ ಪೂರೈಸಿದ ಅಮೃತಕಾಲದ ಸಂದರ್ಭದಲ್ಲಿ "ವಿಕಸಿತ ಭಾರತ' ಕಾರ್ಯಕ್ರಮ ಭಾನುವಾರ ಏರ್ಪಡಿಸಲಾಗಿತ್ತು.
ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2047ರ ವೇಳೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ನೂರು ವರ್ಷ ಪೂರ್ಣವಾಗುವ ಸಂದರ್ಭದಲ್ಲಿ ಜಗತ್ತಿನಲ್ಲಿ ಉಚ್ಚ ಸ್ಥಾನಕ್ಕೆ ಭಾರತವನ್ನು ತಲುಪಿಸುವ ಗುರಿಯೊಂದಿಗೆ ವಿಕಸಿತ ಭಾರತವೆಂಬ ಧೇಯವಾಕ್ಯದ ಅಡಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ವಿಕಸಿತ ಭಾರತ ಕಾರ್ಯಕ್ರಮವನ್ನು ದೇಶಾದ್ಯಂತ ನಡೆಸಲು ಪ್ರಧಾನ ಮಂತ್ರಿಗಳು ಕರೆ ನೀಡಿದ ಫಲವಾಗಿ ಇಂದು ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯು ಸಹ ರಾಷ್ಟ್ರಮಟ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಕೈಜೋಡಿಸಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತ ಸರ್ಕಾರವು ರಸ್ತೆ ಅಭಿವೃದ್ಧಿ, ಉಜ್ವಲ ಯೋಜನೆ, ವಿಮಾನ ನಿಲ್ದಾಣಗಳ ಉನ್ನತಿಕರಣ, ಸರಕು ಸಾಗಾಣಿಕೆ ಅಭಿವೃದ್ಧಿ, ರೈಲ್ವೆ ಸಂಪರ್ಕ ಅಭಿವೃದ್ಧಿ ಮುಂತಾದ ಕಾರ್ಯಕ್ರಮಗಳು ತೀವ್ರಗೊಂಡು ಗುರಿಯನ್ನು ತಲುಪಲು ಮುನ್ನುಡಿ ಬರೆದಂತಾಗಿದೆ ಎಂದು ಶಾಸಕರು ಅಭಿಪ್ರಾಯಪಟ್ಟರು.
ಮಾಜಿ ಉಪಮೇಯರ್ ಉಮಾ ಮುಕುಂದ ಮಾತನಾಡಿ, ಸ್ತ್ರೀಶಕ್ತಿ ಸಬಲೀಕರಣದ ಅಂಗವಾಗಿ ಭಾರತ ಸರ್ಕಾರವು ಮಹಿಳೆಯರಿಗಾಗಿ ಶೇ. 33.33ರಷ್ಟು ಸ್ಥಾನಗಳನ್ನು ಎಲ್ಲ ಕ್ಷೇತ್ರಗಳಲ್ಲಿ ಮೀಸಲಿಟ್ಟಿದೆ. ಸಿಎ ಓದುತ್ತಿರುವ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಪರೀಕ್ಷೆಯಲ್ಲಿ ಪಾಸಾಗಿ ಆರ್ಥಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಈ ನಿಟ್ಟಿನಲ್ಲಿ ಶ್ರಮ ಪಡಬೇಕೆಂದು ಸಲಹೆ ನೀಡಿದರು.
ಐಸಿಎಐ ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಸಿಎ ಧನಪಾಲ್ ಮುನ್ನೊಳ್ಳಿ ಸ್ವಾಗತಿಸಿದರು, ಶಾಖೆಯ ಹಿಂದಿನ ಅಧ್ಯಕ್ಷ ಸಿಎ ಚಂದ್ರಶೇಖರ್ ಡವಳಗಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಸಿಎ ರಿಷಬ್ ಉಪಾಧ್ಯಾಯ ವಂದಿಸಿದರು.
ಗಮನ ಸೆಳೆದ ಓಟ: ಇದಕ್ಕೂ ಪೂರ್ವದಲ್ಲಿ ಬೆಳಗ್ಗೆ 6.30ಕ್ಕೆ ವಿಕಸಿತ ಭಾರತ ಧೇಯವಾಕ್ಯದ ಅಡಿಯಲ್ಲಿ ಸಂಸ್ಥೆಯ ಸದಸ್ಯರು ಹಾಗೂ ವಿದ್ಯಾಥಿರ್ಗಳಿಂದ ರನ್ ಫಾರ್ ವಿಕಸಿತ ಭಾರತ ಏರ್ಪಡಿಸಲಾಗಿತ್ತು.
ಕೇಶ್ವಾಪುರದ ಐಸಿಎಐ ಭವನದಿಂದ ಪ್ರಾರಂಭವಾಗಿ ಶ್ರೀಬಸವೇಶ್ವರ ಸರ್ಕಲ್ನಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುನಃ ಐಸಿಎಐ ಭವನಕ್ಕೆ ಬಂದು ಓಟವು ಮುಕ್ತಾಯಗೊಂಡಿತು.
ನೂರಾರು ಸದಸ್ಯರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಾರ್ವಜನಿಕರ ಗಮನ ಸೆಳೆಯುವಲ್ಲಿ ಓಟ ಯಶಸ್ವಿಯಾಯಿತು.