ಜಿಲ್ಲೆ

ಪೊಲೀಸ್​ ಇಲಾಖೆಯಿಂದ 'ಐಕ್ಯತೆ ಓಟ' ಜಾಥಾ

ಸರ್ದಾರ್​ ವಲ್ಲಭಭಾಯಿ ಪಟೇಲ್​ ಜನ್ಮದಿನ

ಉಡುಪಿಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ದೇಶದ ಮೊದಲ ಉಪಪ್ರಧಾನಿ, ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 150ನೇ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಏಕತಾ ದಿವಸದ ನಿಮಿತ್ತ ಉಡುಪಿ ಜಿಲ್ಲಾ ಪೊಲೀಸ್​ ಇಲಾಖೆಯ ವತಿಯಿಂದ ಶುಕ್ರವಾರ ಭಾರತದ ಐಕ್ಯತೆಯ ಓಟ (ರನ್​ ಫಾರ್​ ಯುನಿಟಿ) ಜಾಥಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಉಡುಪಿಯ ಜೋಡುಕಟ್ಟೆಯಿಂದ ಬೋರ್ಡ್​ ಹೈಸ್ಕೂಲ್​ವರೆಗೆ ಸಾಗಲಿರುವ ಜಾಥಾಕ್ಕೆ ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಂ ಶಂಕರ್​ ಚಾಲನೆ ನೀಡಿದರು. ಶಾಲೆಯ ವಿದ್ಯಾರ್ಥಿಗಳು, ಇಲಾಖೆ ಸಿಬ್ಬಂದಿ, ಅನೇಕ ಸಾರ್ವಜನಿಕರು ಐಕ್ಯತೆ ಓಟದಲ್ಲಿ ಪಾಲ್ಗೊಂಡರು. ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದ ನಿಮಿತ್ತ ಬೋರ್ಡ್​ ಹೈಸ್ಕೂಲ್​ ವರಾಂಡದಲ್ಲಿ ಗಿಡ ನೆಡಲಾಯಿತು.

ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ., ಉಡುಪಿ ನಗರ ಠಾಣೆಯ ಪೊಲೀಸ್​ ನಿರೀಕ್ಷಕ ಮಂಜುನಾಥ್​ ವಿ. ಬಡಿಗೇರ, ಪೊಲೀಸ್​ ಉಪನಿರೀಕ್ಷಕ ಭರತೇಶ್​, ಪೊಲೀಸ್​ ನಿರೀಕ್ಷಕ ನಾರಾಯಣ, ಹಿರಿಯಡಕ ಠಾಣೆಯ ಪೊಲೀಸ್​ ಉಪನಿರೀಕ್ಷಕ ಪುನೀತಕುಮಾರ್​, ಮಲ್ಪೆ ಠಾಣೆಯ ಪೊಲೀಸ್​ ಉಪನಿರೀಕ್ಷಕ ಅನಿಲ್​ ಕುಮಾರ್​ ಇತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ

ರಾಷ್ಟ್ರದ ಐಕ್ಯತೆ, ಸಮಗ್ರತೆ ಮತ್ತು ಭದ್ರತೆ ಕಾಪಾಡಲು ನನ್ನನ್ನು ಅರ್ಪಿಸಿಕೊಳ್ಳುತ್ತೇನೆ. ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ ದೂರದೃಷ್ಟಿ ಮತ್ತು ಕಾರ್ಯಕ್ಷಮತೆಯಿಂದ ಸಾಧಿಸಿದ ರಾಷ್ಟ್ರೀಯ ಏಕೀಕರಣದ ಸ್ಫೂರ್ತಿಯನ್ನು ಕಾಪಾಡುತ್ತೇನೆ. ರಾಷ್ಟ್ರದ ಆಂತರಿಕ ಭದ್ರತೆಯನ್ನು ಖಾತ್ರಿ ಪಡಿಸಲು ನಾನು ನನ್ನದೇ ಆದ ಕೊಡುಗೆಯನ್ನು ನೀಡುತ್ತೇನೆ ಎಂದು ಪ್ರಮಾಣ ಮಾಡುತ್ತೇನೆ. ಅಲ್ಲದೆ, ನನ್ನ ದೇಶ ಬಾಂಧವರಲ್ಲಿ ಈ ಸಂದೇಶ ಸಾರಲು ಶ್ರಮಿಸುತ್ತೇನೆ ಎಂದು ಶ್ರದ್ಧಾಪೂರ್ವಕವಾಗಿ ಪ್ರತಿಜ್ಞೆ ಮಾಡುತ್ತೇನೆ.
ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು. ವಸುದೈವ ಕುಟುಂಬಕಂ ಎಂಬ ತತ್ವದ ನೆಲೆಯಲ್ಲಿ ನಾವೆಲ್ಲರೂ ಈ ರಾಷ್ಟ್ರದ ಹಿತ ಕಾಪಾಡಬೇಕು. ವಿದ್ಯಾರ್ಥಿಗಳೆಲ್ಲರೂ ಕಲಿಕೆಯ ಸಂದರ್ಭದಲ್ಲಿಯೇ ಯಾವುದೇ ಜಾತಿ-ಮತ, ಭೇದ-ಭಾವಕ್ಕೆ ಆಸ್ಪದ ಕೊಡದೆ ಸುಶಿಕ್ಷಿತರಾಗುವ ಮೂಲಕ ಭಾರತದ ಏಳಿಗೆಯಲ್ಲಿ ಕೈಜೋಡಿಸಬೇಕು. ಇಂದು ಮಾಡಿರುವ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ತಾವೆಲ್ಲರೂ ಶಿರಸಾ ಪಾಲಿಸಬೇಕು. | ಹರಿರಾಂ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ