ಜಿಲ್ಲೆ

ರನ್ ಫಾರ್ ನೇಚರ್ ಜಾಗೃತಿ ಓಟಕ್ಕೆ ವ್ಯಾಪಕ ಸ್ಪಂದನೆ,  ನೂರಾರು ಜನರು ಭಾಗಿ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿ ಕೇರ್, ವಸುಂಧರಾ ಫೌಂಡೇಷನ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ರನ್ ಫಾರ್ ನೇಚರ್ 3.0 ಜಾಗೃತಿ ಓಟಕ್ಕೆ ಅದ್ಬುತ ಸ್ಪಂದನೆ ವ್ಯಕ್ತವಾಯಿತು.

ಭಾನುವಾರ ಬೆಳಗ್ಗೆ ಇಲ್ಲಿಯ ತೋಳನಕೆರೆ ಬಳಿಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ರನ್ ಗೆ ಚಾಲನೆ ನೀಡಿದರು. ತೋಳನಕೆರೆ ಬಳಿಯಿಂದ ಟೆಂಡರ್ ಶ್ಯೂರ್ ರಸ್ತೆಯಲ್ಲಿ 3 ಕಿ.ಮೀ. ಹಾಗೂ 5 ಕಿ.ಮೀ. ರನ್ ನಡೆಯಿತು.

ಉತ್ತಮ ಪರಿಸರ ನಿರ್ಮಿಸಿ:
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಶಾಸಕ ಪ್ರಸಾದ ಅಬ್ಬಯ್ಯ ಅವರು, ಭೂಮಿ ನಮ್ಮ ಮನೆಯಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಕಲುಷಿತಗೊಳ್ಳಲು ಬಿಡಬಾರದು. ಆಹ್ಲಾದಕರ ವಾತಾವರಣ ನಿರ್ಮಾಣಕ್ಕಾಗಿ ಇಲ್ಲಿ ಗಿಡಮರಗಳನ್ನು ಬೆಳೆಸಿ ಉತ್ತಮ ಪರಿಸರ ನಿರ್ಮಿಸಬೇಕು ಎಂದರು.

ಪರಿಸರವಾದಿ ಶಿವಾನಂದ ಕಳವೆ ಮಾತನಾಡಿ, ದೇಶದ ಜನರು ಸಾಕ್ಷರತೆಯಲ್ಲಿ ತುಂಬಾ ಮುಂದಿದ್ದೇವೆ. ಆದರೆ, ಪರಿಸರ ಕಾಳಜಿಯಲ್ಲಿ ತುಂಬಾ ರ್ದುಬಲರಾಗಿದ್ದೇವೆ. ಕೆರೆ, ಕಾಡು, ಗುಡ್ಡ ಬೆಟ್ಟಗಳನ್ನು ಉಳಿಸಬೇಕಾಗಿದೆ. ಇಂದಿನ ಮಕ್ಕಳಲ್ಲಿ ಪರಿಸರ ಜಾಗೃತಿ ಕಡಿಮೆ ಆಗುತ್ತಿದೆ. ಇದು ವಿಷಾದದ ಸಂಗತಿ ಎಂದರು.

ಪ್ರಗತಿಪರ ರೈತ ಮಹಿಳೆ ಕವಿತಾ ಮಿಶ್ರಾ ಮಾತನಾಡಿ, ಐಷಾರಾಮಿ ಜೀವನಕ್ಕಿಂತ ಆರೋಗ್ಯಕರ, ಆಹ್ಲಾದಕರ ಪರಿಸರ ಜನರಿಗೆ ಬೇಕಾಗಿದೆ. ಈ ನಿಟ್ಟಿನಲ್ಲಿ ಜನರು ಸಾವಯವ ಉತ್ಪನ್ನ, ಪದಾರ್ಥಗಳನ್ನು ಹೆಚ್ಚಾಗಿ ಬಳಸಲು ಪ್ರಾರಂಭಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಗೋವಿಂದ ಜೋಶಿ ಮಾತನಾಡಿ, ಆಧುನಿಕ ಯುಗದಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಪರಿಸ್ಥಿತಿ ಬಂದಿದೆ. ಪರಿಸರ ರಕ್ಷಣೆಯಲ್ಲೇ ನಮ್ಮ ಭವಿಷ್ಯ ಅಡಗಿದೆ ಎಂದರು.

ಮನೆಗೊಂದು ಮಾವಿನ ಮರ:
ಪ್ರಾಸ್ತಾವಿಕ ಮಾತನಾಡಿದ ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ಈ ವರ್ಷ ಮನೆಗೊಂದು ಮಾವಿನಮರ ಅಭಿಯಾನ ಆರಂಭಿಸಲಾಗಿದ್ದು, 10ಸಾವಿರ ಸಸಿ ವಿತರಿಸಲು ಯೋಚಿಸಲಾಗಿದೆ ಎಂದರು.

ಮಾಜಿ ಮೇಯರ್ ವೀಣಾ ಬರದ್ವಾಡ, ವಿ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ಎಸ್.ಸಿ. ಶೆಟ್ಟರ, ಸುಭಾಷಸಿಂಗ್ ಜಮಾದಾರ ಇತರರು ಪಾಲ್ಗೊಂಡಿದ್ದರು.

ಮೂವರು ಪರಿಸರವಾದಿಗಳಿಗೆ ವಿಶೇಷ ಸಸಿ ನೀಡಿ ಗೌರವಿಸಲಾಯಿತು. ರಕ್ತದಾನಿಗಳಿಗೆ ಮಾವಿನ ಸಸಿ ನೀಡಲಾಯಿತು. ಪ್ರಿಯಾ ಗುಜಮಾಗಡಿ ಸ್ವಾಗತಿಸಿದರು. ರಶೀದ್ ನಿರೂಪಿಸಿದರು.