ಜಿಲ್ಲೆ

ಜಾಂಬ್ರಿ ಪ್ರದೇಶದಲ್ಲಿ ಚಿರತೆ ಬಿಟ್ಟ ವದಂತಿ : ಪಾಣಾಜೆ ಗ್ರಾಮಸಭೆಯಲ್ಲಿ ಪ್ರತಿಭಟನೆ : ಅರಣ್ಯ ಇಲಾಖೆ ಅಧಿಕಾರಿಗಳು ಬರಲು ಪಟ್ಟು

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಕೇರಳ ರಾಜ್ಯದ ಬೇಡಗಂ ಬಳಿಯ ಕೊಳತ್ತೂರಿನಲ್ಲಿ ಬೋನಿನಲ್ಲಿ ಸಿಲುಕಿಕೊಂಡಿದ್ದ ಚಿರತೆಯನ್ನು ಕೇರಳ ಅರಣ್ಯ ಇಲಾಖೆಯವರು ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಭಾಗದಲ್ಲಿರುವ ಪಾಣಾಜೆ ಗ್ರಾಮದ ಜಾಂಬ್ರಿ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಆತಂಕಿತರಾಗಿದ್ದ ಪಾಣಾಜೆ ಗಡಿ ಪ್ರದೇಶದ ಗ್ರಾಮಸ್ಥರು ಸೋಮವಾರ ಪಾಣಾಜೆ ಗ್ರಾ.ಪಂ. ಗ್ರಾಮಸಭೆಯಲ್ಲೇ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಗ್ರಾಮಸ್ಥರು ನಮಗೆ ಗ್ರಾಮಸಭೆಗಿಂತ ಚಿರತೆ ಹಿಡಿಯುವುದೇ ಬಹಳ ಮುಖ್ಯ. ಮೊದಲು ಆ ಬಗ್ಗೆ ಗಮನ ಕೊಡಿ ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.

ಕೊಳತ್ತೂರಿನ ಖಾಸಗಿ ವ್ಯಕ್ತಿಯೊಬ್ಬರ ಹಿತ್ತಲಿನಲ್ಲಿ ಇಡಲಾಗಿದ್ದ ಅರಣ್ಯ ಇಲಾಖೆಯ ಬೋನಿನಲ್ಲಿ ಸಿಲುಕಿಕೊಂಡ ಚಿರತೆಯನ್ನು ರಾತ್ರಿ ವೇಳೆ ಕೇರಳ ರಾಜ್ಯದ ಅರಣ್ಯ ಇಲಾಖೆಯವರು ಇಲಾಖೆಯ ವಾಹನದಲ್ಲಿ ತಂದು ಕರ್ನಾಟಕ ಹಾಗೂ ಕೇರಳ ರಾಜ್ಯ ಗಡಿ ಭಾಗದಲ್ಲಿರುವ ಬಂಟಾಜೆ ರಕ್ಷಿತಾರಣ್ಯದಲ್ಲಿ ಬಿಟ್ಟು ಹೋಗಿದ್ದಾರೆ. ಇದು ಅಧಿಕಾರಿಗಳು ಮಾಡಿದ ಅವಾಂತರ. ಅಧಿಕಾರಿಗಳು ಇಲ್ಲಿಗೆ ಬಂದು, ಚಿರತೆಯನ್ನು ಇಲ್ಲಿ ಬಿಟ್ಟು ಹೋಗಿದ್ದು ಸತ್ಯವೋ ಇಲ್ಲ ಸುಳ್ಳೋ ಎಂಬುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಪೊಲೀಸರಿಗೆ ದೂರು

ಕಾಸರಗೋಡಿನ ಡಿಎಫ್‌ಒ ಅಲ್ಲಿ ಸೆರೆ ಹಿಡಿದಿರುವ ಚಿರತೆಯನ್ನು ಪಿಕಪ್ ವಾಹನದಲ್ಲಿ ಕದ್ದುಮುಚ್ಚಿ ತಂದು ಪಾಣಾಜೆ ಗ್ರಾಮದ ಜಾಂಬ್ರಿ ಪ್ರದೇಶದಲ್ಲಿ ಬಿಟ್ಟು ಹೋಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪಾಣಾಜೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಅಧ್ಯಕ್ಷೆ ಮೈಮುನತುಲ್ ಮೆಹರಾ ಮತ್ತು ಸದಸ್ಯರು ಸ್ಥಳಕ್ಕೆ ಬಂದಿದ್ದ ಪೊಲೀಸರ ಮೂಲಕ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದರು.