ಗೌರಿಬಿದನೂರು: ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಮಹೇಶ್ ಎಸ್. ಪತ್ರಿ ಎಚ್ಚರಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಗುರುವಾರ ಆಯೋಜಿಸಿದ್ದ ಮೈಕ್ರೋ ಫೈನಾನ್ಸ್, ಕಿರು ಸಾಲ ನೀಡುವವರು ಮತ್ತು ಲೇವಾದೇವಿಗಾರರ ಸಭೆಯಲ್ಲಿ ಮಾತನಾಡಿದರು.
ದೂರುಗಳ ಸುರಿಮಳೆ: ಮಧ್ಯಮ ವರ್ಗದ ಜನರ ಕಷ್ಟಗಳನ್ನು ಸಾಲ ನೀಡುವ ಸಂಸ್ಥೆಗಳು ಬಂಡವಾಳ ಮಾಡಿಕೊಳ್ಳುತ್ತಿವೆ. ಆರ್‌ಬಿಐ ನಿಯಮಗಳನ್ನು ಪಾಲಿಸದೆ ಸಾಲ ನೀಡಿ, ವಸೂಲಾತಿ ಸಮಯದಲ್ಲಿ ಕಿರುಕುಳ ನೀಡುತ್ತಿದ್ದಾರೆ. ಬಂಗಾರದ ಒಡವೆಗಳನ್ನು ಅಡಮಾನವಿರಿಸಿಕೊಂಡರೆ ಯಾವುದೇ ನೋಟಿಸ್ ನೀಡದೆ ಒಡವೆಗಳನ್ನು ಹರಾಜು ಮಾಡುತ್ತಾರೆ. ಸಾಲ ನೀಡುವ ಸಂದರ್ಭದಲ್ಲಿ ಹಣ ಪಡೆದು ನೋಂದಣಿಯಿಲ್ಲದ ವಿಮಾ ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಹಣ ಸಂದಾಯ ಮಾಡಿದ್ದಕ್ಕೆ ಯಾವುದೇ ಪಾಸ್‌ಬುಕ್ ನೀಡುವುದಿಲ್ಲ. ಸಾಲ ನೀಡುವಾಗ ಸರ್ಕಾರದ ನಿಯಮಗಳನ್ನು ತಿಳಿಸದೆ ಬಡ್ಡಿಯ ಆಸೆಗಾಗಿ, ದುಡ್ಡಿನ ದಂಧೆಯನ್ನು ಫೈನಾನ್ಸ್ ಕಂಪನಿಗಳು ಮಾಡುತ್ತಿವೆ. ಸಾಲ ನೀಡುವಾಗಲೂ ಹಣ ಪಡೆದುಕೊಳ್ಳುತ್ತಾರೆ. ಸಾಲ ಕಟ್ಟಲು ಒಂದು ದಿನ ತಡವಾದರೆ 500 ರೂ. ಹೆಚ್ಚುವರಿ ಕಟ್ಟಲು ಒತ್ತಾಯ ಮಾಡುತ್ತಾರೆ. ಸಾಲ ವಸೂಲಾತಿಗೆ ರಾತ್ರಿ ವೇಳೆಯಲ್ಲೂ ಮನೆ ಬಳಿ ಹಿಂಸೆ ನೀಡುತ್ತಾರೆ ಎಂದು ಸಭೆಯಲ್ಲಿದ್ದ ಮಹಿಳೆಯರು ದೂರುಗಳ ಸುರಿಮಳೆಗೈದರು.
ಮೈಕ್ರೋ ಫೈನಾನ್ಸ್ಗಳ ಕಿರುಕುಳ ಇದೇ ರೀತಿ ಮುಂದುವರಿದರೆ ನಗರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಮುಚ್ಚಿಸಲಾಗುವುದು ಎಂದು ವಿವಿಧ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ಪ್ರಜಾಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆರ್.ಎನ್.ರಾಜು, ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಅಧ್ಯಕ್ಷ ಲೋಕೇಶ್ ಗೌಡ, ಸಿಐಟಿಯು ಸಿದ್ದಗಂಗಪ್ಪ, ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕರು, ಲೇವಾದೇವಿದಾರರು, ಪ್ರತಿನಿಧಿಗಳು, ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು ಜನವಾದಿ ಮಹಿಳಾ ಸಂಘಟನೆ, ಪ್ರಜಾ ಸಂಘರ್ಷ ಸಮಿತಿ, ಸಿಪಿಎಂ(ಐ), ಸಿಐಟಿಯು ಮುಖಂಡರು ಹಾಜರಿದ್ದರು.
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ಮಹಿಳೆಯರಿಗೆ ಕಿರುಕುಳ ನೀಡಬಾರದು. ಗೌರವಯುತವಾಗಿ ನಡೆದುಕೊಳ್ಳಬೇಕು. ಸರ್ಕಾರದ ನಿಯಮಾವಳಿಗಳನ್ನು ತಪ್ಪದೆ ಪಾಲನೆ ಮಾಡಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚಿನ ಬಡ್ಡಿ ನಿಷಿದ್ಧ
ಜಿಲ್ಲಾ ಸಹಕಾರ ಸಂಘಗಳ ಕಾರ್ಯದರ್ಶಿ ಶಂಕರ್ ಮಾತನಾಡಿ, ಕೆಲವು ಮೈಕ್ರೋ ಫೈನಾನ್ಸ್‌ಗಳು ಹಣ ದುಪ್ಪಟ್ಟು ಮಾಡಿಕೊಳ್ಳುವ ಬಡ್ಡಿ ದಂಧೆಯಲ್ಲಿ ತೊಡಗಿಸಿಕೊಂಡಿವೆ. ಕಾನೂನು ಚೌಕಟ್ಟನ್ನು ಮೀರಿ ಯಾವುದೇ ವ್ಯವಹಾರ ಮಾಡುವುದು ಅಥವಾ ಹೆಚ್ಚಿನ ಬಡ್ಡಿ ವಿಧಿಸುವುದು ನಿಷಿದ್ಧ. ಇಂತಹ ಪ್ರಕರಣಗಳು ಮರುಕಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.