ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪುರಸಭೆಯ ನೂತನ ಅಧ್ಯಕ್ಷರಾಗಿ ರೂಹಿಲ್ಲಾ ಖಾನಂ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಂತರಿಕ ಒಪ್ಪಂದದಂತೆ ಪ್ರಕಾಶ್ ಸಿಂಗ್ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಉಪಾಧ್ಯಕ್ಷರಾಗಿದ್ದ ಸುವರ್ಣ ರವಿ ಅವರು ಪುರಸಭೆ ಪ್ರಭಾರ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಸೋಮವಾರ ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಅಭ್ಯರ್ಥಿ ರೂಹಿಲ್ಲಾ ಖಾನಂ ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ನಿಸರ್ಗ ಪ್ರಿಯಾ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮಾಜಿ ಶಾಸಕ ಕೆ.ಮಹದೇವ್ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಪುರಸಭೆಯ ಪ್ರಸಕ್ತ ಅವಧಿಯಲ್ಲಿ ಜೆಡಿಎಸ್ ಬೆಂಬಲಿತ ನಾಲ್ಕು ಸದಸ್ಯರು ಅಧ್ಯಕ್ಷರಾಗಿ ಆಡಳಿತ ನಡೆಸಿದಂತಾಗಿದೆ. ನೂತನ ಅಧ್ಯಕ್ಷೆ ರೂಹಿಲ್ಲಾ ಖಾನಂ ಅವರ ಪತಿ ಮುಷಿರ್ ಖಾನ್ ಜೆಡಿಎಸ್ ಪಕ್ಷಕ್ಕೆ ದುಡಿದಿದ್ದರು. ಅವರ ಅಕಾಲಿಕ ಸಾವು ನಮಗೆ ತುಂಬಲಾರದ ನಷ್ಟವಾಗಿದೆ. ನಮ್ಮೆಲ್ಲರ ಒಡನಾಡಿಯಾಗಿದ್ದ ಅವರಿಗೆ ಅವರ ಪತ್ನಿಯನ್ನು ಅಧ್ಯಕ್ಷರಾಗಿ ಮಾಡುವ ಮೂಲಕ ಸಮಾಜ ಸೇವೆ ಮಾಡಬೇಕು ಎನ್ನುವ ಆಸೆಯಿತ್ತು. ಇಂದು ಅವರ ಪತ್ನಿಯನ್ನು ಪುರಸಭೆ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಸಾಮಾಜಿಕ ನ್ಯಾಯ ನೀಡಿದೆ ಹಾಗೂ ಒಬ್ಬ ನಿಷ್ಟಾವಂತ ಕಾರ್ಯಕರ್ತನ ಆಸೆ ಈಡೇರಿಸಿದ್ದೇನೆ ಎಂದರು.
ನೂತನ ಅಧ್ಯಕ್ಷೆ ರೂಹಿಲ್ಲಾ ಖಾನಂ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯಾದ ನನಗೆ ಮಾಜಿ ಶಾಸಕ ಕೆ.ಮಹದೇವ್ ಹಾಗೂ ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಅವರು ಪುರಸಭೆ ಅಧ್ಯಕ್ಷ ಸ್ಥಾನ ನೀಡಲು ಸದಸ್ಯರಿಗೆ ಸೂಚಿಸಿ ಸಹಕರಿಸಿದ್ದಾರೆ. ಆದ್ದರಿಂದ ಇವರಿಗೆ ಮತ್ತು ಸದಸ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನನಗೆ ನೀಡಿರುವ ಅಧಿಕಾರವನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅರ್ಷದ್, ಸದಸ್ಯರಾದ ಮಂಜುನಾಥ್ ಸಿಂಗ್, ಪ್ರಕಾಶ್ ಸಿಂಗ್, ಕೆ.ಮಹೇಶ್, ಪಿ.ಸಿ.ಕೃಷ್ಣ, ಪಿ.ಎನ್.ವಿನೋದ್, ನಿರಂಜನ್, ಆಶಾ, ನಾಗರತ್ನಾ, ಶ್ವೇತಾ ಕುಮಾರ್, ಭಾರತಿ, ಸುವರ್ಣ, ನೂರ್ ಜಾನ್, ರೇವತಿ, ಪುಷ್ಪಲತಾ, ಪುರಸಭೆ ಮುಖ್ಯಾಧಿಕಾರಿ ಮಧು, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಮುಖಂಡರಾದ ಅತ್ತರ್ ಮತ್ತಿನ್, ರವಿಕುಮಾರ್, ಸೈಯದ್ ಇಲಿಯಾಸ್, ಸಲ್ಮಾನ್ ಖಾನ್, ಸಲ್ಮಾನ್ ಅಬ್ಬಾಸ್, ಶೇಕ್ ಅಹಮದ್, ಶಫಿ ಉಲ್ಲಾ ಶರೀಫ್, ಸೈಫ್ ಉಲ್ಲಾ ಶರೀಫ್, ತಿಮ್ಮ ನಾಯಕ, ಗೋಪಾಲ, ವಿದ್ಯಾಶಂಕರ್, ಉಮೇಶ್, ರವಿ ಸೇರಿದಂತೆ ಇತರರಿದ್ದರು.