ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಬಿ.ಪಿ.ವಿಜಯ ಕುಮಾರ್, ಅಜೇಯ ಮೊದಲಾದವರಿದ್ದರು. 
ಜಿಲ್ಲೆ

ಸಿಸಿ ಕ್ಯಾಮರಾ ತಂತ್ರಜ್ಞರಿಗಿದೆ ಅವಕಾಶ : ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮಾಹಿತಿ

ಸೌಮ್ಯ ಆರ್

ಬೆಳ್ತಂಗಡಿ: ಇಂದು ಪ್ರತಿ ಮನೆ, ಸಂಸ್ಥೆಗಳಲ್ಲಿ ಅಪರಾಧ ಪತ್ತೆಗೆ ಸಿಸಿ ಕ್ಯಾಮರಾಗಳ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ರುಡ್‌ಸೆಟ್ ಸಂಸ್ಥೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ದುರಸ್ತಿ ತರಬೇತಿ ಪಡೆದವರಿಗೆ ವಿಫುಲ ಅವಕಾಶಗಳಿವೆ ಎಂದು ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ವಿಭಾಗದ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಹೇಳಿದರು.

ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 13 ದಿನ ನಡೆದ, ಸಿಸಿ ಕ್ಯಾಮರಾ ಅಳವಡಿಕೆ ಮತ್ತು ದುರಸ್ತಿ ತರಬೇತಿ ಸಮಾರೋಪದಲ್ಲಿ ಪ್ರಮಾಣಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆ ಪುಸ್ತಕ ವಿತರಿಸಿ ಮಾತನಾಡಿದರು.

ಪ್ರತಿಯೊಂದು ಆಟ, ಪಾಠ, ನೋಟಕ್ಕೆ ಸಿಸಿ ಕ್ಯಾಮರಾ ಅಳವಡಿಸಲೇಬೇಕು ಅನ್ನುವ ಅನಿವಾರ್ಯತೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಪಡೆದವರಿಗೆ ಉದ್ಯಮ, ವ್ಯವಹಾರ ನಡೆಸಲು ಅನುಕೂಲವಾಗುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಿ, ಉತ್ತಮ ಸೇವೆ ನೀಡಿ. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿಯಾಗಬೇಕು ಎಂದರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊಸ-ಹೊಸ ಆವಿಷ್ಕಾರಗಳ ಜತೆಗೆ ವ್ಯವಹಾರ ಬೆಳೆಸಿ ಎಂದರು.

ಸಂಸ್ಥೆ ನಿರ್ದೇಶಕ ಅಜೇಯ ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು. 32 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಹರಿಕೃಷ್ಣ, ಸುಶಿಲ್, ನವೀನ ತರಬೇತಿ ಅನುಭವ ಹಂಚಿಕೊಂಡರು.