ಕುಮಟಾ: ಪಟ್ಟಣದ ಮಹಾತ್ಮ ಗಾಂಧಿ ಮೈದಾನದ (ಮಣಕಿ ಮೈದಾನ) ಸನಿಹದಲ್ಲಿರುವ ರುದ್ರಭೂಮಿಯಲ್ಲಿ ಯಾವುದೇ ಸೂಕ್ತ ವ್ಯವಸ್ಥೆಗಳಿಲ್ಲದೆ, ಶವ ಸಂಸ್ಕಾರಕ್ಕೆ ಬೇಕಾದ ಕನಿಷ್ಠ ಮೂಲಸೌಲಭ್ಯವೂ ಇಲ್ಲದಂತಾಗಿದೆ.
1990ರ ದಶಕದ ಆರಂಭದಲ್ಲಿ ಅಂದಿನ ರೋಟರಿ ತಂಡ ಬಯಲಿನಂತಿದ್ದ ರುದ್ರಭೂಮಿಗೆ ತಕ್ಕಮಟ್ಟಿನ ಸೌಲಭ್ಯ ಒದಗಿಸಿತ್ತು. ರುದ್ರಭೂಮಿಗೆ ಆವರಣ ಗೋಡೆ, ಬಾವಿ, ಪ್ರವೇಶ ದ್ವಾರ, ವಾಹನ ಓಡಾಡಬಲ್ಲಂಥ ಒಳ ರಸ್ತೆ, ಶವದಹನ ಚೌಕಿ, ಮೇಲ್ಛಾವಣಿ ಮುಂತಾದವನ್ನು ನಿರ್ವಿುಸಿಕೊಟ್ಟಿದ್ದರು. ಅಲ್ಲದೆ, ಕೆಲ ವರ್ಷಗಳ ಬಳಿಕ ದಾನಿಗಳಿಂದ ಅಳವಡಿಸಿದ್ದ ಸಿಲಿಕಾನ್ ಛೇಂಬರ್ ಕೂಡ ಪ್ರಯೋಜನಕ್ಕೆ ಬಾರದಂತಾಗಿದೆ.
ರುದ್ರಭೂಮಿಯ ಒಳಗೆ ಎಲ್ಲೆಂದರಲ್ಲಿ ಗಿಡಗಂಟಿ ಬೆಳೆದಿದೆ. ನೀರು-ನೆರಳು ಇಲ್ಲದಂತಾಗಿದೆ. ದಹನಚೌಕಿ ಬಿಟ್ಟು ಎಲ್ಲೆಂದರಲ್ಲಿ ಶವ ದಹಿಸುತ್ತಿರುವುದರಿಂದ ಸ್ಮಶಾನದೊಳಗೆ ಅವ್ಯವಸ್ಥೆ ಎದ್ದು ಕಾಣುತ್ತಿದೆ.
ಕುಮಟಾ ಪಟ್ಟಣದ ಬಹುತೇಕ ಎಲ್ಲ ಭಾಗದ ಹಿಂದುಗಳಿಗೆ ಇದೊಂದೇ ರುದ್ರಭೂಮಿ. ರುದ್ರಭೂಮಿಯನ್ನು ಜಿಲ್ಲೆಯ ಶಿರಸಿ ಇನ್ನಿತರ ಕಡೆಗಳಲ್ಲಿ ಮಾಡಿರುವಂತೆ ಆಧುನಿಕ ವ್ಯವಸ್ಥೆಗಳಿಂದ ಸಜ್ಜುಗೊಳಿಸಿ, ನವೀಕರಿಸುವುದಕ್ಕೆ ಮುರಲೀಧರ ಪ್ರಭು ನೇತೃತ್ವದ ಯುಗಾದಿ ಉತ್ಸವ ಸಮಿತಿ ಮುಂದೆ ಬಂದಿದೆ.
ಸದ್ಯ ಇರುವ ಉರುವಲು ವ್ಯವಸ್ಥೆಯನ್ನು, ವಿದ್ಯುತ್ ಇಲ್ಲವೆ, ಅನಿಲ ಚಿತಾಗಾರವಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಸೂಕ್ತ ಯೋಜನೆಗಳನ್ನು ರೂಪಿಸಿ ಶಾಸಕ ದಿನಕರ ಶೆಟ್ಟಿ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಕಾರ್ಯಕ್ಕೆ ಈಗಿನ ರೋಟರಿ ತಂಡವೂ ಸಹಯೋಗ ನೀಡಲು ಸಿದ್ಧವಾಗಿದೆ. ಸುಸಜ್ಜಿತ ಹಾಗೂ ಅತ್ಯಾಧುನಿಕ ರುದ್ರಭೂಮಿ ಪುನಃ ನಿರ್ವಣಗೊಳ್ಳುವುದಕ್ಕೆ ಪುರಸಭೆಯ ಸಹಕಾರವೂ ಬೇಕಿದೆ.
ಅಭಿವೃದ್ಧಿ ಹಾಗೂ ನಿರ್ವಹಣೆ ಸುವ್ಯವಸ್ಥಿತವಾಗಿರುವಂತೆ ಯೋಜನೆ ಕಾರ್ಯಗತಗೊಳಿಸಬೇಕು. ಕಟ್ಟಿಗೆ ದಾಸ್ತಾನು, ಸ್ನಾನ, ಶೌಚದ ವ್ಯವಸ್ಥೆ, ಪೂಜಾ ಕೊಠಡಿಯ ವ್ಯವಸ್ಥೆ, ಸುತ್ತಲೂ ಚಿಕ್ಕ ಹೂದೋಟ. ನೆಲಹಾಸು, ಕಾವಲುಗಾರ, ನಿರ್ವಾಹಕ ಮೊದಲಾದ ಸಂಪೂರ್ಣ ವ್ಯವಸ್ಥಿತ ಮುಕ್ತಿಧಾಮವಾಗಿ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿಶೀಲ ಸಮಾನ ಮನಸ್ಕರೆಲ್ಲ ಸೇರಿ ಸುವ್ಯವಸ್ಥಿತ ಆಧುನಿಕ ರುದ್ರಭೂಮಿಯ ನಿರ್ಮಾಣ ವಿಚಾರವನ್ನು, ಕಾರ್ಯಗತಗೊಳಿಸಬೇಕು. | ಎನ್.ಆರ್. ಗಜು ರೋಟರಿ ಅಧ್ಯಕ್ಷ, ಕುಮಟಾ