ಮುಧೋಳ: ಅನ್ಯಾಯ, ಅನಾಚಾರ ನಡೆದ ಸಂದರ್ಭದಲ್ಲಿ ಮೊದಲು ಪ್ರತಿಕ್ರಿಯಿಸಿ ನ್ಯಾಯದ ಪರ ಧ್ವನಿ ಎತ್ತುವ ಏಕೈಕ ಸಮಾಜ ರಡ್ಡಿ ಸಮಾಜವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಮೆಟಗುಡ್ಡ ಗ್ರಾಮದಲ್ಲಿ ಹೇಮ-ವೇಮ ಸಂಘ ಹಾಗೂ ಮೆಟಗುಡ್ಡ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ ಹಾಗೂ ಹೇಮ-ವೇಮ ಸಭಾಭವನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಲ್ಲಮ್ಮ ಆಶಿರ್ವಾದ ಲವಾಗಿಸಮಾಜ ಜನರು ಕೊಡುಗೈ ದಾನಿಗಳಾಗಿದ್ದಾರೆ. ರಡ್ಡಿ ಸಮಾಜದವರು ದೇಶ-ವಿದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಸರ್ಕಾರಿ ನೌಕರಿ ಸೇರಿ ಎಲ್ಲ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವಕ್ಕೆ ಅನ್ನಹಾಕುವ ಕಷಿ ಕಾಯಕವನ್ನು ಬಿಡದೆ ಮುಂದುವರಿಸಿಕೊಂಡು ಹೋಗುತ್ತಿರುವ ಸಮಾಜವಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ 36 ವರ್ಷದ ಹಿಂದೆ ಮೊದಲ ಬಾರಿ ಬೆನಕಟ್ಟಿಯಿಂದ ಪ್ರಾರಂಭವಾದ ಹೇಮರಡ್ಡಿ ಮಲ್ಲಮ್ಮ ಜಯಂತಿ ಬಳಿಕ ಎರೆಹೊಸಳ್ಳಿಯ ವೇಮನಾನಂದ ಮಹಾಸ್ವಾಮಿಗಳ ನಿರಂತರ ಕಾರ್ಯದಿಂದ ಇಂದು ರಾಜ್ಯದಲ್ಲಿ ನೂರಾರು ಸಂಖ್ಯೆಯಲ್ಲಿ ಮಲ್ಲಮ್ಮ ಹಾಗೂ ವೇಮನರ ದೇವಾಲಯಗಳು ತಲೆ ಎತ್ತಿವೆ ಎಂದು ಹೇಳಿದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ ಕೌಟುಂಬಿಕ ಬದುಕಿನ ಚಿತ್ರಣ ನೀಡಿದ ಮಲ್ಲಮ್ಮ ಹಾಗೂ ವೇಮನರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂದ ಅವರು, ಹೇಮರಡ್ಡಿ ಮಲ್ಲಮ್ಮ ಶಾಲೆಗೆ 20 ಲಕ್ಷ ರೂ. ಹಾಗೂ ಹೇಮರಡ್ಡಿ ಸಮುದಾಯ ಭವನಕ್ಕೆ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ, ಸರ್ವ ಸಮುದಾಯಗಳ ಬದುಕು ಶ್ರೀಮಂತಗೊಳಿಸಿದ ಮಹಾಯೋಗಿ ವೇಮನ, ಹೇಮರಡ್ಡಿ ಮಲ್ಲಮ್ಮರ ಜೀವನ ಎಲ್ಲರಿಗೂ ಮಾದರಿ. ಸಮುದಾಯ ಭವನ ಹಾಗೂ ದೇವಾಲಯ ಸದುಪಯೋಗವನ್ನು ತಾವೆಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು.
ಎರೆಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರಿ,.ಮಾಜಿ ಸಚಿವ ಎಸ್.ಆರ್. ಪಾಟೀಲ ಮಾತನಾಡಿದರು. ಹೇಮ-ವೇಮ ದಾಸೋಹ ಭವನಕ್ಕೆ ಎಸ್.ಆರ್.ಪಾಟೀಲ ವೈಯಕ್ತಿಕವಾಗಿ ಎರಡು ಲಕ್ಷ ರೂ.ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹೇಮ-ವೇಮ ಸಂಸ್ಥೆಯ ಶಿವನಗೌಡ ನಾಡಗೌಡ ಮಾತನಾಡಿದರು. ವಿ.ಆರ್.ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಗುಂದ ಶಾಸಕ ಎನ್.ಎಚ್.ಕೋನರಡ್ಡಿ, ಮಾಜಿ ಸಚಿವ ಬಿ.ಆರ್.ಯಾವಗಲ್, ಮಾಜಿ ಶಾಸಕ ಆರ್.ವಿ.ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ಎಸ್.ತಳೇವಾಡ, ಎಲ್.ಆರ್.ಉದಪುಡಿ, ಕಲ್ಲಪ್ಪ ನಾಯಿಕ, ಬಾಬುಗೌಡ ಪಾಟೀಲ, ಮುಧೋಳ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ದಯಾನಂದ ಪಾಟೀಲ, ಬಾಬುಗೌಡ ನಾಡಗೌಡ, ಡಾ.ತಿಮ್ಮಣ್ಣ ಅರಳಿಕಟ್ಟಿ, ಸುಭಾಷ ಸೋನವಾಲಕರ, ಸತೀಶ ಬಂಡಿವಡ್ಡರ, ಎಸ್.ಟಿ.ಪಾಟೀಲ, ತಮ್ಮಣ್ಣ ಅರಳಿಕಟ್ಟಿ, ನಾರಾಯಣ ಯಡಹಳ್ಳಿ, ಮಿಲನ ನಾಡಗೌಡ, ವೆಂಕಣ್ಣ ಹುಣಸಿಕಟ್ಟಿ ಇದ್ದರು. ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ತಿಮ್ಮಣ್ಣ ತುಬಾಕಿ ಸ್ವಾಗತಿಸಿದರು. ರೇಣುಕಾ ಗಿರಡ್ಡಿ, ಶಿವಾನಂದ ಮರೆಗುದ್ದಿ ನಿರೂಪಿಸಿದರು. ವಿ.ವೈ.ಉದಪುಡಿ ವಂದಿಸಿದರು.