ಸುಳ್ಯ: ನಿರಂತರ ಕಲಿಕೆ ಹಾಗೂ ಸತತ ಪರಿಶ್ರಮ ಇದ್ದರೆ ಯಾವುದೇ ಕೆಲಸದಲ್ಲಿ ಉತ್ತಮ ಪರಿಣತಿ ಹೊಂದಬಹುದು ಎಂದು ಕೇಂದ್ರೀಯ ರಬ್ಬರ್ ಪ್ರಾಧಿಕಾರ ಪುತ್ತೂರು ವಿಭಾಗ ಸಹಾಯಕ ಅಭಿವೃದ್ಧಿ ಅಧಿಕಾರಿ ಟೋನಿ ಮೈಕಲ್ ಹೇಳಿದರು.
ಕೇಂದ್ರೀಯ ರಬ್ಬರ್ ಪ್ರಾಧಿಕಾರ ಹಾಗೂ ಮಂಡೆಕೋಲು ಗ್ರಾಮ ಪಂಚಾಯಿತಿ ಅರಿವು ಕೇಂದ್ರದ ಜಂಟಿ ಸಹಭಾಗಿತ್ವದಲ್ಲಿ ಎಂಟು ದಿನಗಳ ರಬ್ಬರ್ ಟ್ಯಾಪಿಂಗ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಲ ಉದ್ದಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ರಬ್ಬರ್ ಬೋರ್ಡ್ ವತಿಯಿಂದ ನೀಡಲಾಗುವ ವಿಮೆ ಹಾಗೂ ಇನ್ನಿತರ ಸೌಲಭ್ಯಗಳ ಬಗ್ಗೆ ಸುಳ್ಯ ಕ್ಷೇತ್ರಾಧಿಕಾರಿ ಪವಿತ್ರಾ ಮಾಹಿತಿ ನೀಡಿದರು. ತರಬೇತುದಾರ ಸತ್ಯಶಾಂತಿ ತ್ಯಾಗಮೂರ್ತಿ, ಗ್ರಂಥಾಲಯ ಮೇಲ್ವಿಚಾರಕಿ ಸಾವಿತ್ರಿ ಕಣೆಮರಡ್ಕ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂ ನಿರ್ದೇಶಕ ಉಮೇಶ್ ಗೌಡ ಮತ್ತಿತರರಿದ್ದರು. ಶಶಿಧರ ಮಾವಜಿ ಸ್ವಾಗತಿಸಿದರು. ಗಣೇಶ್ ಮಾವಂಜಿ ನಿರೂಪಿಸಿದರು. ಭಾರತಿ ಯು.ಎಂ. ವಂದಿಸಿದರು.