ಜಿಲ್ಲೆ

ಮಾರುಕಟ್ಟೆಯಲ್ಲಿ ರಬ್ಬರ್ ಕೊರತೆ: ಆರ್‌ಎಸ್‌ಎಸ್ 4 ದರ್ಜೆಯ ಬೆಲೆ 213 ರೂ.ಗೆ ಏರಿಕೆ : ಕಂಪನಿಗಳಿಂದ ಆಮದಿಗೆ ಸಿದ್ಧತೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮುಳ್ಳೇರಿಯ

ರಬ್ಬರ್ ಬೆಲೆ ಏರಿಕೆಯಾಗುತ್ತಿದ್ದು, ಆರ್‌ಎಸ್‌ಎಸ್ 4 ದರ್ಜೆಯ ಬೆಲೆ 213 ರೂ. ತಲುಪಿದೆ. ಮತ್ತಷ್ಟು ಏರಿಕೆ ನಿರೀಕ್ಷೆಯಲ್ಲಿ ರೈತರಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಇರುವುದರಿಂದ ರಬ್ಬರ್ ಕಂಪನಿಗಳು ಆಮದು ಮಾಡಿಕೊಳ್ಳಲು ಸಿದ್ಧತೆ ನಡೆಸಿವೆ.

ದೇಶದಲ್ಲಿ ನೈಸರ್ಗಿಕ ರಬ್ಬರ್ ಆಗಮನ ಕಡಿಮೆಯಾಗಿರುವುದರಿಂದ ಕಂಪನಿಗಳು ಬಿಕ್ಕಟ್ಟಿನಲ್ಲಿವೆ. ರಬ್ಬರ್ ಲಭ್ಯತೆ ಕಡಿಮೆಯಿರುವುದು ಅವುಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿರುವುದರಿಂದ ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿವೆ. ನೈಸರ್ಗಿಕ ರಬ್ಬರ್‌ನ ದೇಶದ ಅತಿದೊಡ್ಡ ರಫ್ತುದಾರ ರಾಜ್ಯ ಕೇರಳ. ಉತ್ಪಾದನೆ ಕಡಿಮೆ ಇರುವುದರಿಂದ ಸರಕುಗಳು ಹೆಚ್ಚು ಬರುತ್ತಿಲ್ಲ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಬೆಲೆ ಹೆಚ್ಚಾಗುವ ಸೂಚನೆ ಇರುವುದರಿಂದ ಟ್ಯಾಪಿಂಗ್ ಮಾಡುವ ರೈತರು ಸರಕುಗಳನ್ನು ಹಿಡಿದಿಟ್ಟುಕೊಳ್ಳುತ್ತಿದ್ದಾರೆ.

ಮಳೆಗಾಲವಾಗಿದ್ದರಿಂದ ಹೆಚ್ಚಿನ ರೈತರು ರಬ್ಬರ್ ಹಾಳೆ ಮಾಡಲು ತಲೆಕೆಡಿಸಿಕೊಳ್ಳದೆ ಹಾಲು ಮಾರಾಟ ಮಾಡುತ್ತಿದ್ದಾರೆ. ಕಂಪನಿಗಳು ತೋಟಗಳಿಗೆ ಬಂದು ಹಾಲು ಸಂಗ್ರಹಿಸುತ್ತವೆ ಎಂಬ ಅಂಶ ರೈತರು ಮನಸ್ಸು ಬದಲಾಯಿಸಲು ಒತ್ತಡ ಹೇರಿವೆ. ಮುಂಬರುವ ತಿಂಗಳಲ್ಲಿ ಟೈರ್ ಕಂಪನಿಗಳು ಹೆಚ್ಚಿನ ರಬ್ಬರ್ ಆಮದು ಮಾಡಿಕೊಳ್ಳಲು ತಯಾರಿ ನಡೆಸುತ್ತಿವೆ. ಇದರೊಂದಿಗೆ ರಬ್ಬರ್ ಬೆಲೆ ಮತ್ತೆ ಕುಸಿಯುವ ಸಾಧ್ಯತೆ ಹೆಚ್ಚಿದೆ.

ಈ ಬಾರಿ ಮಳೆ ತೀವ್ರತೆಯಿಂದಾಗಿ ಟ್ಯಾಪಿಂಗ್ ಕೊರತೆ ಕಂಡುಬಂದಿದೆ. ಹಾಲು ನಿರೀಕ್ಷಿಸಿದಂತೆ ಲಭಿಸುತ್ತಿಲ್ಲ. ಉತ್ತಮ ಬೆಲೆ ಇದ್ದರೂ ಮುಂದೆ ಬೆಲೆ ಕುಸಿಯುವ ಭೀತಿ ಇದೆ. ರಬ್ಬರ್ ಬೋರ್ಡ್ ಕೃಷಿಕರಿಂದ ರಬ್ಬರ್ ಖರೀದಿಸಿ ಸ್ಥಿರ ಬೆಲೆ ಲಭಿಸುವಂತೆ ಮಾಡಬೇಕು. ರವೀಂದ್ರ ರೈ ಮಲ್ಲಾವರ, ರಬ್ಬರ್ ಕೃಷಿಕ, ಆದೂರು ಈ ಬಾರಿ ಬೇಗ ಮಳೆ ಬಂದಿದ್ದರಿಂದ ಪ್ಲಾಸ್ಟಿಕ್ ಹೊದಿಸಲು ಸಾಧ್ಯವಾಗಿಲ್ಲ. ಕಾರ್ಮಿಕರು ಸಿಗುತ್ತಿಲ್ಲ. ಮಳೆ ಕಾರಣ ಎಲೆ ಉದುರುತ್ತಿವೆ. ಒಂದು ಮರಕ್ಕೆ ಟ್ಯಾಪರ್ ಇಟ್ಟು ಕೃಷಿ ಮಾಡುವುದಾದರೆ ಅವರಿಗೆ ಎರಡೂವರೆ ರೂ.ನೀಡಬೇಕಾಗುತ್ತದೆ. ನಾವೇ ಮಾಡುವು ದಾದರೆ ಈಗಿನ ಕೃಷಿ ವಲಯದಲ್ಲಿ ರಬ್ಬರ್ ಅತ್ಯುತ್ತಮ. ಡಾ.ಕಾರ್ತಿಕ್ ಗಾಳಿಮುಖ, ರಬ್ಬರ್ ಕಷಿಕರು