ಜಿಲ್ಲೆ

ಚೇತರಿಕೆ ಹಾದಿಯಲ್ಲಿ ರಬ್ಬರ್ ಮಾರುಕಟ್ಟೆ

ಪುತ್ತೂರು: ಆರು ತಿಂಗಳಿನಿಂದ ಏರಿಳಿಕೆ ಕಾಣದೆ ಸ್ಥಿರವಾಗಿದ್ದ ರಬ್ಬರ್ ಧಾರಣೆ ಅಕ್ಟೋಬರ್ ಮೊದಲ ವಾರದಿಂದ ತುಸು ಏರಿಕೆಯಾಗುತ್ತಿದೆ. ಒಂದು ವರ್ಷದಿಂದ ವಿದೇಶಿ ರಬ್ಬರ್ ಆಮದು ಭಾರತಕ್ಕೆ ಕಡಿತಗೊಂಡಿದ್ದರಿಂದ ಭಾರತದಲ್ಲಿ ರಬ್ಬರ್ ದಾಸ್ತಾನು ಕೊರತೆ ಹೆಚ್ಚಾಗುತ್ತಿದ್ದು, ಅನಿವಾರ್ಯವಾಗಿ ದೇಶೀಯ ರಬ್ಬರ್ ಬೇಡಿಕೆ ಜಾಸ್ತಿಯಾಗಿದೆ.

ರಬ್ಬರ್ ಉತ್ಪಾದನೆ ನಿರ್ವಹಣೆ ವೆಚ್ಚ ಮಾರಾಟ ಬೆಲೆಗಿಂತ ಹೆಚ್ಚಾಗುತ್ತಿರುವುದರಿಂದ ಬಹುತೇಕ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ನಡೆಸದೆ ತೋಟಗಳನ್ನು ಖಾಲಿ ಬಿಡುತ್ತಿದ್ದು, ಉತ್ಪಾದನೆ ಕಡಿಮೆಯಾಗಿದೆ. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಆರ್ಥಿಕ ನೆರವಿನಲ್ಲಿ ರಬ್ಬರ್‌ಗೆ ಬೆಂಬಲ ಬೆಲೆ ನೀಡಲು ಯೋಜನೆ ರೂಪಿಸಿದರೂ ಇನ್ನೂ ಕಾರ್ಯಗತವಗಿಲ್ಲ. 2019ರ ೆಬ್ರವರಿ ವೇಳೆ ಐಟಿಆರ್‌ಸಿ ಒಪ್ಪಂದದನ್ವಯ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ನ ರಬ್ಬರ್ ಆಮದು ಭಾರತಕ್ಕೆ ಕಡಿತಗೊಂಡ ವೇಳೆ ಭವಿಷ್ಯದ ಲಾಭದ ದೃಷ್ಟಿಯಿಂದ ಬಹುತೇಕ ಕಂಪನಿಗಳು ಭಾರತದಲ್ಲಿ ರಬ್ಬರ್ ದಾಸ್ತಾನು ಇರಿಸಿದೆ.

ರಬ್ಬರ್ ಆಮದು ಹೆಚ್ಚಿಸಿ ಭಾರತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮುನ್ನ ಭಾರತದ ಗೋದಾಮುಗಳಲ್ಲಿ ಸಿಂಥೆಟಿಕ್ ರಬ್ಬರ್ ಹಾಗೂ ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್‌ನ ರಬ್ಬರ್ ಯಥೇಚ್ಛವಾಗಿ ಶೇಖರಿಸಲಾಗಿತ್ತು. ಲಾಕ್‌ಡೌನ್ ವೇಳೆ ಟಯರ್ ಹಾಗೂ ಇತರೆ ರಬ್ಬರ್ ಉತ್ಪನ್ನ ಉತ್ಪಾದನೆ ಕಡಿಮೆಯಾಗಿತ್ತು. ಆದರೆ ಈಗ ಉತ್ಪಾದನಾ ಪ್ರಮಾಣ ಹೆಚ್ಚುತ್ತಿದ್ದು, ವಿದೇಶಿ ರಬ್ಬರ್ ದಾಸ್ತಾನು ಖಾಲಿಯಾಗುತ್ತಿದೆ.

ಭಾರತದಲ್ಲಿ ಉತ್ಪಾದನೆಯಾಗುವ 12 ಲಕ್ಷ ಮೆಟ್ರಿಕ್ ಟನ್ ರಬ್ಬರ್‌ನಲ್ಲಿ ಕರ್ನಾಟಕದ ಪಾಲು 40 ಸಾವಿರ ಮೆಟ್ರಿಕ್‌ಟನ್. ಆದರೆ ಕಳೆದ 2 ವರ್ಷಗಳಿಂದ ಬೆಲೆ ಇಳಿಕೆ, ನುರಿತ ಟ್ಯಾಪರ್‌ಗಳ ಕೊರತೆ, ಹೆಚ್ಚಾಗುತ್ತಿರುವ ಟ್ಯಾಪಿಂಗ್ ವೆಚ್ಚಗಳಿಂದ ಬಹುತೇಕ ಬೆಳೆಗಾರರು ರಬ್ಬರ್ ಉತ್ಪಾದನಾ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. 2019ರ ಆರಂಭದಿಂದಲೂ ರಬ್ಬರ್ ಬೆಳೆ ಏರಿಳಿತ ಕಾಣುತ್ತಿದ್ದು, ರಬ್ಬರ್ ಕೊರತೆ ಪರಿಣಾಮ ಧಾರಣೆ ಏರಿಕೆಯಾಗಿದೆ. ದೇಶೀಯ ಮಾರುಕಟ್ಟೆಗೆ ಸಿಂಥೆಟಿಕ್ ರಬ್ಬರ್ ಹೆಚ್ಚಾಗಿ ಆಮದಾಗುತ್ತಿರುವುದರಿಂದ ಭಾರತದಲ್ಲಿ ದೇಶೀ ರಬ್ಬರ್ ಮಾರುಕಟ್ಟೆ ಕುಸಿಯುತ್ತಿತ್ತು. ಈಗ ಸಿಂಥೆಟಿಕ್ ರಬ್ಬರ್ ಆಮದಿಗೂ ಕಡಿವಾಣ ಬಿದಿದ್ದು, ದೇಶೀಯ ರಬ್ಬರ್‌ಗೆ ಬೇಡಿಕೆ ಹೆಚ್ಚಾಗಿದೆ.

ಏರುಗತಿಯಲ್ಲಿ ರಬ್ಬರ್ ಬೆಲೆ

2020ರ ಜನವರಿ ವೇಳೆ ರಬ್ಬರ್ ಆರ್‌ಎಸ್‌ಎಸ್ 4- 127-130 ರೂ, ಆರ್‌ಎಸ್‌ಎಸ್ 5-118-123 ಇತ್ತು. ಫೆಬ್ರವರಿ ವೇಳೆ ತುಸು ಇಳಿಕೆಯಾಗಿ ಆರ್‌ಎಸ್‌ಎಸ್ 4- 127-128 ರೂ, ಆರ್‌ಎಸ್‌ಎಸ್ 5-118-120 ರೂ. ಧಾರಣೆ ಇತ್ತು. ಮಾರ್ಚ್ ನಂತರ ಲಾಕ್‌ಡೌನ್ ಸಂದರ್ಭ ಬಹುತೇಕ ರಬ್ಬರ್ ಸಂಸ್ಕರಣಾ ಘಟಕಗಳು ಮುಚ್ಚಿದ್ದವು. ಆಗಸ್ಟ್ ವೇಳೆ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆ ತೆರೆದು ಅಕ್ಟೋಬರ್ 1ರ ವರೆಗೆ ಆರ್‌ಎಸ್‌ಎಸ್ 4- 130 ರೂ, ಆರ್‌ಎಸ್‌ಎಸ್ 5-124 ರೂ. ಸ್ಥಿರ ಧಾರಣೆ ಇತ್ತು. ಪ್ರಸ್ತುತ ಗುರುವಾರದ ಏರಿಕೆಯೊಂದಿಗೆ ರಬ್ಬರ್ ಆರ್‌ಎಸ್‌ಎಸ್ 4- 141 ರೂ, ಆರ್‌ಎಸ್‌ಎಸ್ 5-135 ರೂ, ಲಾಟ್- 119 ರೂ, ಸ್ಕ್ರಾಪ್-1-79 ರೂ, ಸ್ಕ್ರಾಪ್ 2- 71 ರೂ.ಗೆ ಖರೀದಿಯಾಗುತ್ತಿದೆ.

ಅಡಕೆ ಧಾರಣೆ ಸ್ಥಿರ

ಅಡಕೆ ಧಾರಣೆಯಲ್ಲಿ ಬದಲಾವಣೆಯಾಗಿಲ್ಲ. ಹೊಸ ಅಡಕೆ (ಹೊಸ ಕೊಲು) 330 ರೂ., ಹೊಸ ಅಡಕೆ (ಸಿಂಗಲ್ ಚೋಲ್) 400 ರೂ., ಹಳೇ ಅಡಕೆ (ಡಬಲ್ ಚೋಲ್) 410 ರೂ.ನಲ್ಲಿ ವ್ಯವಹರಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಹೊಸ ಅಡಕೆ 325-335 ರೂ., ಹೊಸ ಅಡಕೆ(ಸಿಂಗಲ್ ಚೋಲ್) 390-403 ರೂ., ಹಳೇ ಅಡಕೆ (ಡಬಲ್ ಚೋಲ್) 400- 415ರೂ.ಗೆ ಖರೀದಿಯಾಗಿದೆ. ತೆಂಗಿನಕಾಯಿ ಸಣ್ಣ ಗಾತ್ರ(ಕೆಜಿಗೆ) 24-26 ರೂ, ಮಧ್ಯಮ ಗಾತ್ರ 28-29 ರೂ, ದೊಡ್ಡ ಗಾತ್ರ 30ರಿಂದ 35 ರೂ, ಕೊಬ್ಬರಿ 80-90 ರೂ, ಕಾಳುಮೆಣಸು- 330-335 ರೂ, ಕೊಕೋ 45 ರೂ. ಧಾರಣೆ ಇದೆ.

ಲಾಕ್‌ಡೌನ್ ಹಿನ್ನೆಲೆ ರಬ್ಬರ್ ಉತ್ಪನ್ನ ತಯಾರಿಸುವ ಕಂಪನಿಗಳು ತೆರೆದಿಲ್ಲ. ಪ್ರಸ್ತುತ ವಿದೇಶಿ ರಬ್ಬರ್, ಸಿಂಥೆಟಿಕ್ ರಬ್ಬರ್ ಆಮದಿಗೆ ಕಡಿವಾಣ ಬಿದ್ದಿದೆ. ದೇಶದಲ್ಲಿ ರಬ್ಬರ್ ದಾಸ್ತಾನು ಕೊರತೆಯಾಗಿದ್ದರಿಂದ ದೇಶೀಯ ರಬ್ಬರ್‌ಗೆ ಬೇಡಿಕೆ ಹೆಚ್ಚಾಗಿದೆ.

- ಕರ್ನಲ್ ಎಸ್.ಶರತ್ ಭಂಡಾರಿ, ಅಖಿಲ ಕರ್ನಾಟಕ ರಬ್ಬರ್ ಬೆಳೆಗಾರರ ಸಂಘ