ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತವರು, ಕಣ್ಣೂರು ಜಿಲ್ಲೆಯ ಪಿಣರಾಯಿ ಎಂಬಲ್ಲಿ ಸೋಮವಾರ ಸಿಪಿಎಂ ಕಾರ್ಯಕರ್ತರ ಹಲ್ಲೆಯಿಂದ ಆರೆಸ್ಸೆಸ್ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ.
ಆರೆಸ್ಸೆಸ್ ಕಾರ್ಯಕರ್ತ ಪಿಣರಾಯಿ ಪಾಣುಂಡ ಪುದಿಯವೀಟಿಲ್ ನಿವಾಸಿ ಜಿಮ್ನೇಶ್ ಮೃತಪಟ್ಟವರು. ಹಲ್ಲೆಯಿಂದ ಎ.ಆದರ್ಶ್, ಪಿ.ವಿ ಜಿಷ್ಣು, ಟಿ.ಅಕ್ಷಯ್ ಹಾಗೂ ಕೆ.ಪಿ ಆದರ್ಶ್ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ಸಂಜೆ ಆರೆಸ್ಸೆಸ್ ಶಾಖೆಯಲ್ಲಿ ನಡೆದ ಗುರುದಕ್ಷಿಣೆ ಉತ್ಸವದಲ್ಲಿ ಪಾಲ್ಗೊಂಡು ವಾಪಸಾಗುತ್ತಿದ್ದಾಗ ಸಿಪಿಎಂ ಕಾರ್ಯಕರ್ತರ ತಂಡವೊಂದು ಇವರನ್ನು ತಡೆದು ಹಲ್ಲೆ ನಡೆಸಿದೆ. ಕುಸಿದು ಬಿದ್ದ ಜಿಮ್ನೇಶ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲಾಗಲಿಲ್ಲ. ಗಾಯಾಳು ಅಕ್ಷಯ್ ಮನೆಗೂ ತಂಡ ಹಾನಿ ಮಾಡಿದೆ.
ಸರ್ಕಾರ ಶವ ಮಹಜರು ವರದಿಯಲ್ಲಿ ಜಿಮ್ನೇಶ್ ಸಾವು ಹೃದಯಾಘಾತದಿಂದ ಸಂಭವಿಸಿರುವುದಾಗಿ ಬಿಂಬಿಸುವ ಪ್ರಯತ್ನ ನಡೆಸುತ್ತಿರುವುದಾಗಿ ಬಿಜೆಪಿ ಆರೋಪಿಸಿದೆ.