ಪಾಂಡವಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆಯಾಗಿ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಣವೇಷ ಧರಿಸಿದ್ದ ಸ್ವಯಂ ಸೇವಕರು ಭಾನುವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿ ಜಮಾವಣೆಗೊಂಡ ಸ್ವಯಂ ಸೇವಕರು ಭಗವಧ್ವಜಕ್ಕೆ ಪಾರ್ಥನೆ ಸಲ್ಲಿಸುವ ಮೂಲಕ ಪಥ ಸಂಚಲನ ಪ್ರಾರಂಭಿಸಿದರು. ಅಲ್ಲಿಂದ ಹೊರಟ ಪಥ ಸಂಚಲನ ಪಟ್ಟಣದ ಪೇಟೆ ಬೀದಿ ಮೂಲಕ ಶಾಂತಿನಗರ, ಮಹಾಂಕಾಳೇಶ್ವರಿ ಬಡಾವಣೆ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಬೀದಿ, ಬಸವನಗುಡಿ ಬೀದಿ, ಪೆನ್ಸನ್ ಕಾಲನಿ, ಪೊಲೀಸ್ ಠಾಣೆ ರಸ್ತೆ, ಬೀರಶೆಟ್ಟಹಳ್ಳಿ, ಹಿರೇಮರಳಿ ಆಟೋ ಸರ್ಕಲ್, ಚರ್ಚ್ ರಸ್ತೆ, ಡಾ.ರಾಜ್‌ಕುಮಾರ್ ವೃತ್ತ, ಐದುದೀಪದ ವೃತ್ತ, ತ್ಯಾಗರಾಜ ಕಾಲನಿ ಮೂಲಕ ವಿ.ಸಿ ಕಾಲನಿ ತಲುಪಿ ಅಲ್ಲಿನ ಶ್ರೀ ರಾಮಮಂದಿರ ಬಳಿ ಆಗಮಿಸಿದ ಪಥ ಸಂಚಲನವನ್ನು ಮುಕ್ತಾಯಗೊಳಿಸಿದರು.
ಪಥ ಸಂಚಲನದ ವೇಳೆ ಕೆಲ ಬಡಾವಣೆಯ ನಿವಾಸಿಗಳು ಮಹಡಿ ಮೇಲೆ ನಿಂತು ಪುಷ್ಪಾರ್ಚನೆಗೈದು ಸ್ವಾಗತಿಸಿದರು. ನಡು ರಸ್ತೆಯಲ್ಲಿ ಶಿಸ್ತುಬದ್ಧವಾಗಿ ಕುಳಿತ ಕಾರ್ಯಕರ್ತರು ಬಾಳೆಹಣ್ಣು, ಬೆಲ್ಲದ ಪಾನಕ ಹಾಗೂ ಬೆಳ್ಳಗಿನ ಉಪಾಹಾರವನ್ನು ಸವಿದರು. ಪಥಸಂಚಲನ ಸಾಗಿದ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ಆರ್‌ಎಸ್‌ಎಸ್ ಸಂಘಟನೆ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು ಗಣವೇಷಧಾರಿಗಳಾಗಿ ಪಥಸಂಚಲನದಲ್ಲಿ ಭಾಗಿಯಾಗಿ ಸುಮಾರು 3 ಕಿಮೀ ವರಗೆ ನಡೆಸುವ ಮೂಲಕ ಸಂಭ್ರಮಾಚರಣೆ ಮಾಡುತ್ತಿದ್ದೇವೆ. ಆರ್‌ಎಸ್‌ಎಸ್ ಸಂಘಟನೆ ಶಿಸ್ತು ರೂಢಿಸಿಕೊಂಡು ಕೆಲಸ ಮಾಡುತ್ತಿದೆ. ದೇಶದ ಸಂಸ್ಕೃತಿ, ಸಂಸ್ಕಾರವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದೆ. ಮುಂದೆ ಭಾರತ ವಿಶ್ವಕ್ಕೆ ಮಾದರಿಯಾಗಬೇಕು ಎಂಬ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಸಂಘಟನೆ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿದೆ ಎಂದರು.
ದೇಶದಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡಲು ಯಾವುದೇ ಪಕ್ಷದಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದವರಿಗೆ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಖಜಾನೆ ಖಾಲಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳಕೊಡಲು ಹಣವಿಲ್ಲ. ಜನ ಇದನ್ನು ಪ್ರಶ್ನೆ ಮಾಡುತ್ತಾರೆ ಎಂದು ವಿಷಯಾಂತರ ಮಾಡಲು ಬ್ಯಾನ್ ವಿಚಾರ ಮುನ್ನೆಲೆಗೆ ತಂದಿದ್ದಾರೆ. ರಾಜ್ಯದಲ್ಲಿ ಜಾತಿ ಸಮೀಕ್ಷೆ ಅವಶ್ಯಕತೆ ಇರಲಿಲ್ಲ, ಅದನ್ನು ಮಾಡುತ್ತಿದ್ದಾರೆ. ಇದೀಗ ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ. ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮಗನಾಗಿ, ಒಬ್ಬ ಜವಾಬ್ದಾರಿಯುತ ಸಚಿವನಾಗಿ ಈ ರೀತಿ ಹೇಳಿಕೆ ಕೊಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಎಂದರು.
ಪಥಸಂಚಲನದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಧನಂಜಯ್, ಮುಖಂಡರಾದ ಜೆ.ಶಿವಲಿಂಗೇಗೌಡ, ಎಚ್.ಎನ್.ಮಂಜುನಾಥ್, ಆನಂದ್, ಶಂಭೂನಹಳ್ಳಿ ಮಂಜುನಾಥ್, ಚಿಕ್ಕಮರಳಿ ನವೀನ್, ಸಂದೇಶ್, ಮಾರ್ಕಂಡಯ್ಯ, ಡೇರಿ ರಾಮು, ಸೋಮಶೇಖರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.