ಜಿಲ್ಲೆ

ಹಿಂದು ಸಮಾಜ ಶಕ್ತಿಶಾಲಿಯಾಗಿ ಬೆಳೆಯಬೇಕು,  ಆರ್ ಎಸ್ಎಸ್ ದಕ್ಷಿಣ ಮಧ್ಯ ಕ್ಷೇತ್ರ ಬೌದ್ಧಿಕ ಶ್ರೀಧರ ಸ್ವಾಮಿ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಜಗತ್ತು ಶಕ್ತಿಗೆ ಗೌರವ ಕೊಡುತ್ತದೆ, ಹಾಗಾಗಿ ಹಿಂದು ಸಮಾಜವು ಶಕ್ತಿಶಾಲಿಯಾಗಿ ಬೆಳೆಯಬೇಕು, ಸಣ್ಣ ಸಣ್ಣ ರೋಗಗಳನ್ನು ನಿವಾರಿಸಿ ದೇಹವನ್ನು ಬಲಿಷ್ಠ ಮಾಡಿದಂತೆ ಸಮಾಜದಲ್ಲಿ ಬೇರೂರಿರುವ ಜಾತಿ ವ್ಯವಸ್ಥೆ, ಮೇಲು- ಕೀಳು ಭಾವವನ್ನು ಕಿತ್ತೊಗೆದು ಎಲ್ಲರನ್ನೂ ಒಟ್ಟು ಗೂಡಿಸುವ ಮಹತ್ವದ ಜವಾಬ್ದಾರಿ ಸ್ವಯಂ ಸೇವಕರ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂದ ದಕ್ಣಿಣ ಮಧ್ಯ ಕ್ಷೇತ್ರ ಬೌದ್ಧಿಕ ಪ್ರಮುಖ ಶ್ರೀಧರ ಸ್ವಾಮಿ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ವತಿಯಿಂದ ವಿಜಯದಶಮಿ ನಿಮಿತ್ತ ಇಲ್ಲಿಯ ನೆಹರು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪಥಸಂಚಲನ, ಸಾರ್ವಜನಿಕ ಸಮಾರಂಭದಲ್ಲಿ ಅವರು ಬೌದ್ಧಿಕ ನಡೆಸಿಕೊಟ್ಟರು.

ಹಿಂದು ಸಮಾಜವು ಗೊಂದಲದಲ್ಲಿದೆ. ಎಲ್ಲರನ್ನೂ ಒಗ್ಗೂಡಿಸಿ ಬಲಶಾಲಿ ಮಾಡುತ್ತ ಮಾಡುತ್ತ ತನ್ನ ಶಕ್ತಿಯನ್ನೇ ಮರೆತು ಬಿಟ್ಟಿದೆ. ಅದನ್ನು ಪುನರ್ ಸ್ಥಾಪಿಸಬೇಕಾಗಿದೆ. ಜಗತ್ತಿನಲ್ಲಿ ಹಿಂದುಗಳ ಬಗ್ಗೆ ಗೌರವ ಹೆಚ್ಚುತ್ತಿದ್ದು, ಇದು ಇನ್ನಷ್ಟು ಅಧಿಕಗೊಳ್ಳಬೇಕಾದರೆ ನಾವೆಲ್ಲ ಒಂದು, ನಾವೆಲ್ಲ ಬಂಧು, ನಾವು ಭಾರತ ಮಾತೆಯ ಮಕ್ಕಳು ಎಂಬ ಭಾವ ಎಲ್ಲೆಡೆ ಮೂಡಬೇಕು ಎಂದರು.

ಸಮಾಜ ಒಗ್ಗೂಡಿಸುವಲ್ಲಿ ಮಹಾತ್ಮ ಬಸವೇಶ್ವರ, ಸಂತ ಜ್ಞಾನೇಶ್ವರ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿದ ಅವರು, ಹಿಂದು ಸಮಾಜದ ಎಲ್ಲ ಅಂಗಗಳು ಬಲಿಷ್ಠ ಆಗಬೇಕು. ಹಾಗಾಗಿ ಎಲ್ಲರ ಗೌರವ ಕಾಪಾಡುತ್ತ ಸಾಮರಸ್ಯದ ಭಾವವನ್ನು ಉತ್ಪತ್ತಿ ಮಾಡಬೇಕಿದೆ. ಸಂಘ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

ಅತಿಥಿಯಾಗಿದ್ದ ಹುಬ್ಬಳ್ಳಿ ಸ್ಕಾನ್ ಸೆಂಟರ್ ಎಂಡಿ ಡಾ. ಚಂದ್ರಕಾಂತ ಕಾಟವೆ ಮಾತನಾಡಿ, ಸಮಾಜದಲ್ಲಿ ಇತ್ತೀಚೆಗೆ ಟಿಸುತ್ತಿರುವ ಆಗು ಹೋಗುಗಳನ್ನು ಗಮನಿಸಿದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಗತ್ಯತೆ ಹೆಚ್ಚಿರುವುದು ಎದ್ದು ಕಾಣುತ್ತದೆ. ಹಿಂದುಗಳಲ್ಲಿ ಒಡಕು ಉಂಟು ಮಾಡುವ ಕುತಂತ್ರಗಳು ನಡೆಯುತ್ತಿವೆ. ಭವಿಷ್ಯದ ನಾಗರಿಕರಾದ ನಮ್ಮ ಮಕ್ಕಳಿಗೆ ಹಿಂದು ಧರ್ಮ, ಸಂಸತಿ ತಿಳಿಸುವ ಕಾರ್ಯ ಆಗಬೇಕು. ನಮ್ಮ ಧರ್ಮವನ್ನು ರಕ್ಷಿಸಿ ಆಚರಣೆಗೆ ತಂದರೆ ಅದೇ ಧರ್ಮವು ನಮ್ಮನ್ನು ರಕ್ಷಿಸುತ್ತದೆ ಎಂದರು.

ಮಹಾನಗರ ಸಂಚಾಲಕ ಶಿವಾನಂದ ಆವಟಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ಡಾ. ವಿಎಸ್ವಿ ಪ್ರಸಾದ, ಗೋವಿಂದ ಜೋಶಿ, ಶಂಕರಣ್ಣ ಮುನವಳ್ಳಿ, ಲಿಂಗರಾಜ ಪಾಟೀಲ, ಅಶೋಕ ಕಾಟವೆ, ರಂಗಾ ಬದ್ದಿ, ನಾಗೂಸಾ ಕಲಬುಗಿರ್, ಮಲ್ಲಿಕಾರ್ಜುನ ಸಾವಕಾರ, ರಾಜಣ್ಣ ಕೊರವಿ, ವಿವಿಧ ಸಮಾಜದ ಮುಖಂಡರು, ಇತರರು ಪಾಲ್ಗೊಂಡಿದ್ದರು.

ಪಥಸಂಚಲನ:
ಪಥ ಸಂಚಲನದ ಮೊದಲ ಮಾರ್ಗ ನೆಹರು ಮೈದಾನದಿಂದ ಆರಂಭಗೊಂಡು ಕೃಷ್ಣ ಭವನ, ಸಿದ್ದಪ್ಪ ಕಂಬಳಿ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟ, ತುಳಜಾಭವಾನಿ ವೃತ್ತ, ಪೆಂಡಾರಗಲ್ಲಿ, ಶಂಕರ ಮಠ, ಕಂಚಗಾರ ಗಲ್ಲಿ, ಹಿರೇಪೇಟ, ಸರಾ ಗಟ್ಟಿ ವೃತ್ತ, ಜವಳಿ ಸಾಲ, ಬೆಳಗಾವಿ ಗಲ್ಲಿ ಹಾಗೂ.

ಎರಡನೇ ಮಾರ್ಗ ಟೌನ್ ಹಾಲ್ನಿಂದ ಆರಂಭಗೊಂಡು ಜೆ.ಸಿ. ನಗರ, ಶಕ್ತಿ ರಸ್ತೆ, ಸ್ಟೇಶನ್ ರಸ್ತೆ, ಗಣೇಶ ಪೇಟ ವೃತ್ತ, ಸಿಬಿಟಿ, ಮಕಾನದಾರ ಗಲ್ಲಿ, ಮಂಗಳವಾರ ಪೇಟ, ಇಟಗಿ ಮಾರುತಿ ಗಲ್ಲಿ, ರಾಧಾಕೃಷ್ಣ ಗಲ್ಲಿಯ ಮೂಲಕ ಸಾಗಿ ದುರ್ಗದಬೈಲ್ನಲ್ಲಿ ಸಂಗಮವಾಗಿ ಬ್ರಾಡವೇ, ಶಿವಾಜಿ ವೃತ್ತ, ಕೊಪ್ಪಿಕರ ರಸ್ತೆ ಮೂಲಕ ನೆಹರೂ ಮೈದಾನದಲ್ಲಿ ಸಮಾರೋಪಗೊಂಡವು.

ಮಾರ್ಗದುದ್ದಕ್ಕೂ ಸಾರ್ವಜನಿಕರು ಮನೆ ಮುಂದೆ ರಂಗೋಲಿ ಬಿಡಿಸಿ, ಪುಷ್ಪಮಳೆ ಗರೆದು ಸ್ವಾಗತಿಸಿದರು. ಭಾರತ ಮಾತಾ ಕೀ ಜೈ ಘೋಷಣೆ ಕೂಗಿದರು. ಮಕ್ಕಳು ಮಹಾಪುರುಷರ ವೇಷ ಧರಿಸಿ ಗಮನ ಸೆಳೆದರು.