ಅಮೀನಗಡದಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥಸಂಚಲನ ನಡೆಯಿತು. 
ಜಿಲ್ಲೆ

ಅಮೀನಗಡದಲ್ಲಿ ಆರ್‌ಎಸ್‌ಎಸ್ ಪಥಸಂಚಲನ

ದತ್ತಾತ್ರೇಯ ಪಿ ಕುಲಕರ್ಣಿ

ಅಮೀನಗಡ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷದಾರಿಗಳಿಂದ ಪಟ್ಟಣದಲ್ಲಿ ಭಾನುವಾರ ಆಕರ್ಷಕ ಪಥಸಂಚಲನ ನಡೆಯಿತು.

ಸಂಜೆ 4ಗಂಟೆ ವೇಳೆಗೆ ಸಂಗಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನದಿಂದ ಗಣವೇಷಧಾರಿ ಸ್ವಯಂ ಸೇವಕರು ಪಥ ಸಂಚಲನ ಆರಂಭಿಸಿದರು. 200ಕ್ಕೂ ಹೆಚ್ಚು ಸೇವಕರು ಬಿಳಿ ಅಂಗಿ, ಖಾಕಿ ಪ್ಯಾಂಟ್, ತಲೆಗೆ ಟೋಪಿ ಧರಿಸಿ ಕೈಯಲ್ಲಿ ದಂಡ ಹಿಡಿದು ಪಾಲ್ಗೊಂಡಿದ್ದರು.

ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು. ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಜನಸ್ತೋಮ ಗಣವೇಷಧಾರಿಗಳ ಮೇಲೆ ಪುಷ್ಪಾರ್ಚನೆ ಮಾಡಿ ಸಂಭ್ರಮಿಸಿತು. ಚಿಕ್ಕ ಮಕ್ಕಳು ದೇಶಭಕ್ತರು, ಧಾರ್ಮಿಕ ಮುಖಂಡರು, ರಾಜ ಮಹಾರಾಜರು, ರಾಣಿಯರ ವೇಷಭೂಷಣ ಧರಿಸಿ ಗಮನಸೆಳೆದರು.

ಮನೆಗಳ ಮಾಳಿಗೆ, ಅಂಗಡಿಗಳ ಕಟ್ಟೆ ಮೇಲೆ ನಿಂತು ಜನರು ಪಥಸಂಚಲನ ವೀಕ್ಷಿಸಿದರು.

ಪಥಸಂಚಲನವು ಸಂಗಮೇಶ್ವರ ಹೈಸ್ಕೂಲ್ ಮೈದಾನ, ಚಿತ್ತರಗಿ ಕ್ರಾಸ್, ಅಗಸಿ ಬಾಗಿಲು, ಸಂಗಮೇಶ್ವರ ತೇರಿನ ಮನೆ, ಮಂಗಳಮ್ಮ ದೇವಿ ದೇವಸ್ಥಾನ, ನಾಗಪ್ಪನ ಕಟ್ಟಿ, ಗಣೇಶ ಗುಡಿ, ಚಾಲುಕ್ಯ ಡಾಬಾ, ಬಸ್ ನಿಲ್ದಾಣ, ಸೂಳೇಭಾವಿ ಕ್ರಾಸ್ ಮಾರ್ಗವಾಗಿ ಸಂಗಮೇಶ್ವರ ಹೈಸ್ಕೂಲ್ ಮೈದಾನಕ್ಕೆ ಬಂದು ತಲುಪಿತು.

ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ ಸವದಿ, ಪಿಎಸ್‌ಐ ಜ್ಯೋತಿ ಪೂಜಾರಿ ಹಾಗೂ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದರು. ಪಪಂ ಸದಸ್ಯ ವಿಜಯ ಕನ್ನೂರ, ಮುಖಂಡರಾದ ಮಲ್ಲೇಶ ನಿಡಗುಂದಿ, ಪರಸು ಪ್ರೀತಿಗೇರಿ ಇತರರಿದ್ದರು.