ಜಿಲ್ಲೆ

ನಗರದಲ್ಲಿ ಆರ್​ಎಸ್​ಎಸ್​ ಪ್ರಮುಖರ ಬೈಠಕ್​

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಇಲ್ಲಿನ ಯಾಲಕ್ಕಿ ಶೆಟ್ಟರ್​ ಕಾಲನಿಯ ಶಂಕರ ಮಠದಲ್ಲಿ ಉತ್ತರ ಹಾಗೂ ದಕ್ಷಿಣ ಪ್ರಾಂತಗಳ ಸಮನ್ವಯ ಸಮಿತಿ ಸಭೆ ಮಂಗಳವಾರ ಜರುಗಿತು.

2 ದಿನಗಳ ಕಾಲ ನಗರದಲ್ಲಿ ನಡೆಯುವ ಸಭೆಗೆ ಮಂಗಳವಾರ ಚಾಲನೆ ಸಿಕ್ಕಿದ್ದು, ಆಯಾ ಪ್ರಾಂತಗಳಲ್ಲಿ ನಡೆದಿರುವ ಚಟುವಟಿಕೆ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕಾರ್ಯಗಳು ಕುರಿತು ಚರ್ಚಿಸಲಾಗಿದೆ. ಇವುಗಳ ಜತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು, ರಾಜ್ಯದ ಜ್ವಲಂತ ಸಮಸ್ಯೆ ಹಾಗೂ ಇತ್ತೀಚಿನ ಆಗುಹೋಗಳ ಕುರಿತು ಚರ್ಚೆ ನಡೆದಿವೆ ಎನ್ನಲಾಗಿದೆ.

ಬುಧವಾರ ಸಹ ಬೈಠಕ್​ ನಡೆಯಲಿದ್ದು, ಇನ್ನೂ ಅನೇಕ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಘ ಪರಿವಾರದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ್​ ಭಟ್​, ಲಕ್ಷ್ಮಣ್ ಹೂಗಾರ, ಅರುಣಕುಮಾರ, ರಾಘವೇಂದ್ರ ಕಾಗವಾಡ, ಸುಧೀರ, ಮುಕುಲ್​, ತಿಪ್ಪೇಸ್ವಾಮಿ, ಸುನೀಲಕುಮಾರ, ವಿಶ್ವ ಹಿಂದು ಪರಿಷದ್​, ಬಜರಂಗದಳ, ಬಿಜೆಪಿ, ಎಬಿವಿಪಿ, ವಿವಿಧ ಸಂಘಟನೆಗಳು, ಸಂಘ ಪರಿವಾರದ ಪ್ರಮುಖರು ಸೇರಿ ಸುಮಾರು 150 ಜನರು ಬೈಠಕ್​ನಲ್ಲಿ ಪಾಲ್ಗೊಂಡಿದ್ದರು.

ಸಮಾಲೋಚನಾ ಸಭೆ: ಬೈಠಕ್​ ಬಳಿಕ ಖಾಸಗಿ ಹೋಟೆಲ್​ನಲ್ಲಿ ಹು-ಧಾ ಬಿಜೆಪಿ ಮಹಾನಗರ ಹಾಗೂ ಗ್ರಾಮೀಣ ಘಟಕದ ಪದಾಧಿಕಾರಿಗಳೊಂದಿಗೆ ಬಿ.ವೈ. ವಿಜಯೇಂದ್ರ ಸಮಾಲೋಚನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ಗೆಲುವಿಗೆ ಈಗಿನಿಂದಲೇ ಶ್ರಮಿಸಬೇಕು. ಹೀಗಾಗಿ ಪಕ್ಷ ಬಲಪಡಿಸುವ ಕಾರ್ಯ ನಡೆಸಬೇಕು ಎಂದು ಸಂದೇಶ ನೀಡಿದ್ದಾರೆ. ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಮೋಹನ ರಾಮದುರ್ಗ, ಆನಂದ ಯಾವಗಲ್ಲ, ಸಿದ್ದು ಕಲ್ಯಾಣಶೆಟ್ಟಿ, ಸುಶೀಲಕುಮಾರ ರಾಮದುರ್ಗ, ಇತರರು ಇದ್ದರು.