ಜಿಲ್ಲೆ

ಭಾರತ ಎಂದಿಗೂ ಕ್ರಿಸ್ತನ ನಾಡಾಗಲು ಬಿಡಲ್ಲ: ಕಲ್ಲಡ್ಕ ಪ್ರಭಾಕರ್​ ಭಟ್​

lakshmihegde

ರಾಮನಗರ: ಕೃಷ್ಣನ ನಾಡಾದ ಭಾರತವನ್ನು ಎಂದಿಗೂ ಕ್ರಿಸ್ತನ ನಾಡು ಮಾಡಲು ಬಿಡುವುದಿಲ್ಲ. ಭಯಕ್ಕೋ, ಇನ್ನಾವುದೋ ಕಾರಣಕ್ಕೆ ಮತಾಂತರಗೊಂಡವರೂ ನಮ್ಮವರೇ ಆಗಿದ್ದು, ನಮ್ಮ ಜೀನ್ ಅವರ ಜೀನ್ ಒಂದೇ ಎಂದು ಆರ್​ಎಸ್​ಎಸ್ ಹಿರಿಯ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ರಾಮನಗರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೇತೃತ್ವದಲ್ಲಿ ಭಾನುವಾರ ನಡೆದ ಬೃಹತ್ ಪಥ ಸಂಚಲನದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮವರನ್ನು ನಾವು ರಕ್ಷಣೆ ಮಾಡಿಕೊಳ್ಳುವ ಉದ್ದೇಶದಿಂದ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆಯೇ ಹೊರತು, ಮತ್ಱಾರದ್ದೋ ಪೌರತ್ವ ಕಸಿದುಕೊಳ್ಳಲು ಅಲ್ಲ ಎಂದರು. ಭಾರತ ಈಗ ವಿಶ್ವ ಗುರುವಾಗಿದ್ದು, ನರೇಂದ್ರ ಮೋದಿ ಅವರಂತಹ ಬಲಿಷ್ಠ ನಾಯಕರು ಈ ದೇಶಕ್ಕೆ ಪ್ರಧಾನಿಯಾಗಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.

ಗಣವೇಷಧಾರಿಗಳಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ರುದ್ರೇಶ್, ಮಾಜಿ ಎಂ.ಎಲ್.ಸಿ ಅಶ್ವತ್ಥನಾರಾಯಣ್ ಗೌಡ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್ ಇದ್ದರು. ಆರ್​ಎಸ್​ಎಸ್ ಮುಖಂಡ ಎಲೆಕೇರಿ ರವೀಶ್ ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರೆ, ತುಮಕೂರು ವಿಭಾಗದ ಕಾರ್ಯವಾಹ ವ.ನ.ಶೇಷ ವೇದಿಕೆಯಲ್ಲಿದ್ದರು.

ಕೇಸರಿಮಯವಾಗಿದ್ದ ರಾಮನಗರ

ಬೃಹತ್ ಸಮಾವೇಶದಲ್ಲಿ ಸಾವಿರಾರು ಗಣವೇಷಧಾರಿ ಗಳು ಭಾಗವಹಿಸಿ ಹೊಸ ಸಂಚಲನ ಸೃಷ್ಟಿಸಿದರು. ಪಥಸಂಚಲನ ವೇಳೆ ಕೇಸರಿಮಯವಾಗಿದ್ದ ದಾರಿಯುದ್ದಕ್ಕೂ ಭಗವಾಧ್ವಜಕ್ಕೆ ಹೂವಿನ ಅಭಿಷೇಕ ನಡೆಯಿತು. ನಗರದ ಬಾಲಗೇರಿ ಮತ್ತು ಕೆಂಪೇಗೌಡ ವೃತ್ತದಿಂದ ಪ್ರತ್ಯೇಕವಾಗಿ ಹೊರಟ ಪಥ ಸಂಚಲನ ಬಂಡಿ ಮಾಂಕಾಳಮ್ಮ ವೃತ್ತದ ಬಳಿ ಸಂಗಮಗೊಂಡು ಜೂನಿಯರ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.