ಕಲಘಟಗಿ: ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸುವ ಸಲುವಾಗಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಈಗಾಗಲೇ 100 ವರ್ಷ ಪೂರೈಸಿದ್ದು, ರಾಷ್ಟ್ರ ಭಕ್ತಿಯ ಜತೆಗೆ ಭಾರತ ಮಾತೆಯ ಸೇವೆಗೆ ಸನ್ನದ್ಧವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಕ್ತಾರ ನರಸಿಂಹ ಕುಲಕರ್ಣಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಸಂಘದ ಶತಾಬ್ಧಿ ವರ್ಷ ಹಾಗೂ ವಿಜಯದಶಮಿ ನಿಮಿತ್ತ ಭಾನುವಾರ ಪಟ್ಟಣದ ಜನತಾ ಇಂಗ್ಲಿಷ್ ಸ್ಕೂಲ್ ಮೈದಾನದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮೂರು ಕಾರಣಗಳನ್ನು ಒಳಗೊಂಡು ದೇಶದಲ್ಲಿ ಏಕತೆ ್ನ ಸಾರಲು ಸ್ಥಾಪನೆಯಾಗಿದೆ. ಹಿಂದುಗಳಾದ ನಾವು ನಮ್ಮನ್ನು ಮರೆತಿರೋದು, ಪರಕೀಯರಿಂದಾದ ಸ್ವಾರ್ಥದ ಬೆಳವಣಿಗೆಯನ್ನು ದೂರ ಸರಿಸೋದು ಮತ್ತು ಭಾರತದಲ್ಲಿ ಬಲವಾದ ಒಗ್ಗಟ್ಟನ್ನ್ನು ಇಡೀ ವಿಶ್ವಕ್ಕೆ ಸಾರುವುದೇ ಸಂಘದ ಮೂಲ ಉದ್ದೇಶವಾಗಿದೆ ಎಂದರು.
ಪ್ರೋಗ್ರೆಸೀವ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನಂದೀಶ ಪಾಟೀಲ ಮಾತನಾಡಿ, ದೇಶದ ಶಕ್ತಿಯನ್ನು ರಾಷ್ಟ್ರ ಭಕ್ತಿಯನ್ನಾಗಿ ಜಾಗೃತಗೊಳಿಸುವ ಸಲುವಾಗಿ ಕೇಶವ ಬಲಿರಾಮ ಹೆಡ್ಗೆವಾರ ಅವರು ಸಂಘವನ್ನು ಸ್ಥಾಪನೆ ಮಾಡಿದ್ದಾರೆ. ಅಂದು ತೆಗೆದುಕೊಂಡ ಅವರ ನಿಲುವು ಇಂದು ಶತಾಬ್ಧಿ ವರ್ಷ ಪೂರೈಸುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸಲು ಸಾಕ್ಷಿಯಾಗಿದೆ ಎಂದರು.
ಭವ್ಯ ಪಥ ಸಂಚಲನಕ್ಕೆ ಪುಷ್ಪ ನಮನ: ಜನತಾ ಇಂಗ್ಲಿಷ್ ಸ್ಕೂಲ್ ಆವರಣದಿಂದ ಸಂಜೆ ಹೊರಟ ಆರ್ಎಸ್ಎಸ್ ಪಥಸಂಚಲನ ನೋಡುಗರ ಕಣ್ಮನ ಸೆಳೆಯಿತು. ಶಿಸ್ತು, ಸಂಯಮದಿಂದ ಹೆಜ್ಜೆ ಹಾಕಿದ ಗಣವೇಷಧಾರಿಗಳಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದಾರಿಯುದ್ದಕ್ಕೂ ಸಾರ್ವಜನಿಕರು ಹೂಮಳೆಗರೆದು ಸ್ವಾಗತ ಕೋರಿದರು. ಮಹಿಳೆಯರು ಪಥಸಂಚಲನದ ಮಾರ್ಗವನ್ನು ರಂಗೋಲಿ ಹಾಕಿ, ಹೂಗಳಿಂದ ಆಲಂಕರಿಸಿದ್ದರು. 1048 ಕ್ಕೂ ಅಧಿಕ ಗಣವೇಷಧಾರಿಗಳು ಪಾಲ್ಗೊಂಡಿದ್ದರು.