ಜಿಲ್ಲೆ

ಎಲ್ಲ ಧರ್ಮಗಳೂ ಕೂಡಿ ಬಾಳುವುದನ್ನೇ ಭೋದಿಸಿವೆ;ಮೋಹನ ಭಾಗವತ್

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಎಲ್ಲ ಧರ್ಮಗಳೂ ಕೂಡ ಕೂಡಿ ಬಾಳುವುದನ್ನೇ ಭೋದಿಸಿವೆ. ಆದರೆ, ಎಲ್ಲಿಗೋ ಹೋಗಬೇಕಾದವರು ಇಂದು ಮತ್ತೆಲ್ಲಿಗೋ ಹೊರಟ್ಟಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಚಾಲಕ ಮೋಹನ ಭಾಗವತ್ ಪ್ರತಿಪಾದಿಸಿದರು.

ಇಲ್ಲಿನ ಹಿಂದವಾಡಿಯ ಕೆಎಲ್.ಎಸ್ ಕಾನೂನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಕಾಡೆಮಿ ಆಪ್ ಕಂಪ್ಯಾರೇಟಿವ್ ರಿಲಿಜನ್ ನ ಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ, ರಾಷ್ಟ್ರಕ್ಕಾಗಿ ನಮ್ಮನ್ನು ನಾವು ಸಮರ್ಪಿಸಿಕೊಂಡು ನಮ್ಮ ನಮ್ಮ ಮಾರ್ಗಗಳಲ್ಲಿ ಸಾಗುವುದು ಒಳಿತು. ಸತ್ಯ, ಕರುಣೆ, ಶುಚಿತ್ವ ಹಾಗೂ ತಪ್ಪಸ್ಸಿನ ಮೂಲಕ ಚಿತ್ತಶುದ್ಧರಾಗಿ ತಪ್ಪಸ್ಸು ಮಾಡಿದರೆ ಸತ್ಯದ ದಾರಿ ತಾನಾಗಿಯೇ ಗೋಚರಿಸುತ್ತದೆ ಎಂದು ಹೇಳಿದರು.

ಭಾರತದ ಪರಂಪರೆಯನ್ನು ಶ್ರೀಮಂತಗೊಳಿಸುವುದರ ಜೊತೆಗೆ ಆ ಪರಂಪರೆಯನ್ನು ವಿಶ್ವಕ್ಕೆ ಸಾರಬೇಕಿದೆ. ನಾವು ನಡೆಯುವ ಮಾರ್ಗಗಳು ಬೇರೆ ಬೇರೆಯಾಗಿದ್ದರೂ ಕೂಡ ನಮ್ಮೆಲರ ಗುರಿ ಒಂದೆಯಾಗಿದೆ. ಹೀಗಾಗಿ, ಚಿಂತನ-ಮಂಥನಗಳೊಂದಿಗೆ ಎಲ್ಲರೂ ಒಂದಾಗಿ ಸಾಗಬೇಕಾದ ಅಗತ್ಯವಿದೆ ಎಂದರು.

ಸಂಸ್ಕಾರ, ಸದ್ಗುಣಗಳು, ಉಪಾಸನೆಗಳ ಮೂಲಕ ಸನ್ಮಾರ್ಗದಲ್ಲಿ ನಡೆದ ನಮ್ಮನ್ನು ನಾವು ಪರಿವರ್ತನೆಗೊಳಿಸುತ್ತಾ, ಮೋಕ್ಷ ಪ್ರಾಪ್ತಿಗಾಗಿ, ಗುರಿಯೆಡೆಗೆ ಮುನ್ನಡೆಯಬೇಕೆಂದರು.

ಚಿಂತನೆಗಳು ಬೇರೆ ಬೇರೆ ಇರಬಹುದು. ಸಾಗುವ ಮಾರ್ಗಗಗಳು ಬೇರೆಯಾಗಿದ್ದರೂ, ಆಚರಣೆಗಳೂ ಕೂಡ ಬೇರೆಯಿದ್ದರೂ ಕೊನೆಗೆ ಸೇರುವ ಗುರಿ ಒಂದೇ ಆಗಿದೆ. ಎಲ್ಲ ಧರ್ಮಗಳ ಸಾರವೂ ಇದೇ ಆಗಿದೆ. ನಾವು ಉತ್ತಮವಾದ ಮಾರ್ಗದಲ್ಲಿ ಸಾಗಿದರೆ ಇನ್ನೊಬ್ಬರಿಗೆ ಸನ್ಮಾರ್ಗ ತೋರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸಾಧನೆ ಸಿದ್ಧಿಗಾಗಿ ಅನುಭೂತಿಯ ಜೊತೆಗೆ ತತ್ವಜ್ಞಾನವೂ ಬೇಕೆಂಬುದನ್ನು ಅನಾದಿಕಾಲದಿಂದಲೂ ನೋಡುತ್ತಿದ್ದೇವೆ. ಮತ್ತು ಅದು ಸತ್ಯವೂ ಹೌದು. ಸನಾತನ ಕಾಲದಿಂದಲೂ ಅನುಭೂತಿ ಇರುವ ಮಹಾನುಭಾವರು ದೊರಕಿರುವುದು ನಮ್ಮ ಸೌಭಾಗ್ಯ. ಭಾರತ ದೇಶಕ್ಕೆ ಪರಿಶ್ರಮ ಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆದರೆ, ಪರಿಶ್ರಮದ ಪ್ರಯತ್ನಗಳು ಸಾಕ್ಷಾತ್ಕಾರಗೊಳಿಸುವುದಕ್ಕಾಗಿ ಶ್ರದ್ಧೆ ಬಹಳ ಮುಖ್ಯವಾಗಿದೆ ಎಂಬುದನ್ನು ಮೋಹನ್ ಭಾಗವತ್ ಒತ್ತಿಹೇಳಿದರು.