ಮೈಸೂರು: ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ಮೈಸೂರು ಮಹಾನಗರ ಘಟಕದಿಂದ ನಗರದಲ್ಲಿ ಆಕರ್ಷಕ ಪಥ ಸಂಚಲನ ನಡೆಯಿತು. ಗೋಕುಲಂನ 3ನೇ ಹಂತದಲ್ಲಿರುವ ಮೈಸೂರು ಒನ್ ನಾಗರಿಕ ಸೇವಾ ಕೇಂದ್ರದ ಮೈದಾನದಲ್ಲಿ ಸಂಜೆ ಗಣವೇಷದಲ್ಲಿ ಸಮಾವೇಶಗೊಂಡರು.
ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಶಿಸ್ತುಬದ್ಧವಾಗಿ ಆಕರ್ಷಕವಾದ ವಿಜಯದಶಮಿಯ ಪಥ ಸಂಚಲನದಲ್ಲಿ ಹೆಜ್ಜೆ ಹಾಕಿದರು. ಮೊದಲಿಗೆ ಸಂಘದ ಹಾಡನ್ನು ಸಾಮೂಹಿಕವಾಗಿ ಹಾಡಿ, ಶ್ಲೋಕವನ್ನು ಪಠಿಸಲಾಯಿತು. ನಂತರ ಧ್ವಜಾರೋಹಣ ನೆರವೇರಿಸಿ, ಪಥ ಸಂಚಲವನ್ನು ಆರಂಭಿಸಲಾಯಿತು. ಗೋಕುಲಂನ ಜೋಡಿ ರಸ್ತೆ, ಗಣಪತಿ ದೇವಸ್ಥಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಶಿಸ್ತಿನಿಂದ ಸಾಗಿ, ಕೊನೆಗೊಂಡಿತು.
ಸಂಘಕ್ಕೆ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕೈಗೆತ್ತಿಕೊಂಡಿರುವ 7 ಕಾರ್ಯಕ್ರಮಗಳ ಬಗ್ಗೆ ತಿಳಿಸಲಾಯಿತು. ಈಗಾಗಲೇ ಅ.2 ರಂದು ವಸತಿಗಳಲ್ಲಿ ವಿಜಯದಶಮಿ ಉತ್ಸವವನ್ನು ಆಚರಿಸಲಾಗಿದೆ. ವಿವಿಧ ನಗರಗಳಲ್ಲಿ ನ.16ರಿಂದ 23ರ ತನಕ ಯುವ ಸಮಾವೇಶ ನಡೆಸುವುದು. ಡಿ.7 ರಿಂದ 28ರ ತನಕ ಮನೆ, ಮನೆ ಸಂಪರ್ಕ, 2026ರ ಜನವರಿ 18 ರಿಂದ ಫೆ.1ರ ತನಕ ಹಿಂದೂ ಸಮ್ಮೇಳನ, ಏಪ್ರಿಲ್‌ನಿಂದ ಮೇ ತಿಂಗಳ ತನಕ ಸಾಮಾಜಿಕ ಸದ್ಭಾವನ ಸಭೆ ನಡೆಸುವುದು. ಜೂನ್ ತಿಂಗಳಿಂದ ಜುಲೈ ತನಕ ಪ್ರಮುಖ ನಾಗರಿಕ ಗೋಷ್ಠಿ, ಸೆ.20 ರಿಂದ 27ರ ತನಕ ಶಾಖಾ ವಿಸ್ತಾರ ಸಪ್ತಾಹ ಹಮ್ಮಿಕೊಳ್ಳಲಾಗುವುದು ಎಂದು ಸಂಘಟಕರು ವಿವರಿಸಿದರು.
ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಮೈಸೂರು ಮಹಾನಗರ ಸಂಘ ಚಾಲಕ ವಾಸುದೇವಭಟ್, ಮಹಾನಗರ ಕಾರ್ಯವಾಹಕ ಲತೇಶ, ದಕ್ಷಿಣ ಪ್ರಾಂತ್ಯ ಸಹ ಪ್ರಾಂತ್ಯ ಪ್ರಚಾರಕ ನಂದೀಶ್, ಕಾರ್ಯಕಾರಣಿ ಸದಸ್ಯ ವೆಂಕಟರಾಮ್, ತಿಲಕ್, ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಂಸದ ಪ್ರತಾಪಸಿಂಹ, ಮಾಜಿ ಶಾಸಕ ಎಲ್.ನಾಗೇಂದ್ರ, ಮೈಲಾಕ್ ಮಾಜಿ ಅಧ್ಯಕ್ಷ ಮೈ.ವಿ.ರವಿಶಂಕರ್, ಮಾಜಿ ಮೇಯರ್ ಸಂದೇಶ್ ಸ್ವಾಮಿ ಇದ್ದರು.