ಜಿಲ್ಲೆ

ಸ್ವಾತಂತ್ರ್ಯ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ ಆರ್‌ಎಸ್‌ಎಸ್ : ಸಿಎಂ ಸಿದ್ದರಾಮಯ್ಯ ಟೀಕೆ

ಸದೇಶ್ ಕಾರ್ಮಾಡ್

ಮೈಸೂರು: ಆರ್‌ಎಸ್‌ಎಸ್ ನಾಯಕರುಗಳು ಬ್ರಿಟಿಷರೊಂದಿಗೆ ಸೇರಿ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡಿದರು. 1925ರಲ್ಲೇ ಆರ್‌ಎಸ್‌ಎಸ್ ಪ್ರಾರಂಭವಾದರೂ ಆರ್‌ಎಸ್‌ಎಸ್ ಸರ ಸಂಘಚಾಲಕರಾದ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಮತ್ತು ಮಾಧವ ಸದಾಶಿವ ಗೋಲ್ವಾಲ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ನಗರದ ಕಾಂಗ್ರೆಸ್ ಭವನದ ಆವರಣದಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ನಗರ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಆರ್‌ಎಸ್‌ಎಸ್‌ನವರು ಭಾರತೀಯ ಜನಸಂಘ ಸ್ಥಾಪಿಸಿದರು. ಆ ನಂತರ ಜನಸಂಘ ಬಿಜೆಪಿ ಪಕ್ಷವಾಯಿತು. ಸ್ವಾತಂತ್ರೃ ಹೋರಾಟದಲ್ಲಿ ಭಾಗಿಯಾಗದ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಕುರಿತು ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶಭಕ್ತಿ, ದೇಶದ ಅಭಿವೃದ್ಧಿ ವಿಚಾರವಾಗಿ ಬಿಜೆಪಿಯವರು ಬಹಳ ಮಾತನಾಡುತ್ತಾರೆ. ನಾವು ಮಾತ್ರ ದೇಶಭಕ್ತರು ಎಂದು ಬಿಂಬಿಸಿಕೊಳ್ಳುತ್ತಾರೆ. ಆದರೆ, ದೇಶದ ಸ್ವಾತಂತ್ರೃ ಹೋರಾಟದಲ್ಲಿ ಮಾತ್ರ ಅವರು ಭಾಗವಹಿಸಲಿಲ್ಲ. ಇದೀಗ ಕೇಂದ್ರ ಸರ್ಕಾರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಹೇಳುತ್ತಿದೆ. ಆದರೆ, ಲೋಕಸಭೆಯಲ್ಲಿ ಬಿಜೆಪಿಯ ಒಬ್ಬ ಮುಸ್ಲಿಂ ಸಂಸದ ಸಹ ಇಲ್ಲ. ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂಬುದು ಕೇವಲ ರಾಜಕೀಯ ಘೋಷಣೆ ಅಷ್ಟೆ ಎಂದು ಟೀಕಿಸಿದರು.

ಬಿಜೆಪಿ ಎಂದಿಗೂ ಅಂಬೇಡ್ಕರ್ ಅವರ ಸಂವಿಧಾನ ವಿರೋಧಿಯಾಗಿಯೇ ಕೆಲಸ ಮಾಡಿದೆ. ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ಕೊಡುವ ಕೆಲಸ ಬಿಜೆಪಿ ಮಾಡಲಿಲ್ಲ. ನನ್ನನ್ನು ಸೋಲಿಸಿದವರು ಹಿಂದೂ ಮಹಾ ಸಭಾದ ವಿ.ಡಿ.ಸಾವರ್ಕರ್ ಹಾಗೂ ಸಿಪಿಐನ ರಂಗ ಎಂದು ಅಂಬೇಡ್ಕರ್ ಅವರು ತಮ್ಮ ಸ್ನೇಹಿತರೊಬ್ಬರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಈ ಸತ್ಯದ ವಿಚಾರವನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕು ಎಂದರು.

ಜಾತ್ಯತೀತ ಹಾಗೂ ಸಮಾಜವಾದಿ ಪದವನ್ನು ಸಂವಿಧಾನದಿಂದ ತೆಗೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ನೀಡಿದ್ದಾರೆ. ಅವರಿಗೆ ಸಮಾಜವಾದ ಹಾಗೂ ಜಾತ್ಯತೀತೆಯಲ್ಲಿ ನಂಬಿಕೆ ಇಲ್ಲ. ಸಂವಿಧಾನಾತ್ಮಕವಾಗಿ ನಡೆದುಕೊಳ್ಳುವ ಪಕ್ಷವೇನಾದರು ಇದ್ದರೆ ಅದು ಕಾಂಗ್ರೆಸ್ ಮಾತ್ರ. ಸಮಾಜವು ಅಸಮಾನತೆ, ಸಂಘರ್ಷ, ಜಾತೀಯತೆ, ಶೋಷಣೆಯಿಂದ ಕೂಡಿರಬೇಕು ಎಂದು ಸಂಘ ಪರಿವಾರದವರು ಬಯಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳಬಾರದು. ಬಿಜೆಪಿ, ಜೆಡಿಎಸ್‌ಗೆ ಯಾವುದೇ ಸಿದ್ಧಾಂತವಿಲ್ಲ. ಈ ಎರಡು ಪಕ್ಷಗಳು ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿಲ್ಲ. ಜನರ ಬಹುಮತ ಎಂದಿಗೂ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವರಿಗೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿಯಾದರು ವ್ಯಂಗ್ಯವಾಡಿದರು.

ಶಾಸಕ ತನ್ವೀರ್ ಸೇಠ್ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಯಾಗಿದೆಯೆಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರವಾಗಿ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಲೋಕಾರ್ಪಣೆ ಮಾಡುವ ಮೂಲಕ ಅವರಿಗೆ ತಿರುಗೇಟು ನೀಡುತ್ತಿದ್ದಾರೆ ಎಂದರು.

ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಬೇಕು. ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರಭಾವಕ್ಕಿಂತಲೂ ಸಂಘಟನೆ, ಶಿಸ್ತಿಗೆ ಪಕ್ಷದಲ್ಲಿ ಮನ್ನಣೆಯಿದೆ. ಚುನಾವಣಾ ನಂತರದಲ್ಲೂ ಪಕ್ಷ ಬಲಪಡಿಸಲು ಶ್ರಮಿಸಬೇಕು. ರಾಜಕೀಯವಾಗಿ ಬೆಳೆಯಬೇಕು ಎಂದು ಸಲಹೆ ನೀಡಿದರು.

ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಅಬ್ರಹಾರ್ ಹಾಗೂ ಪದಾಧಿಕಾರಿಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಟಿಪ್ಪು ಸುಲ್ತಾನ್ 69 ಸಾವಿರ ಜನರನ್ನು ಹತ್ಯೆ ಮಾಡಿದರು ಎಂದು ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುವ ಮೂಲಕ ಜನರಲ್ಲಿ ಕೋಮು ಭಾವನೆ ಕೆರಳುವ ಕೆಲಸ ಮಾಡುತ್ತಿದ್ದಾರೆ. ಆ ಸಂದರ್ಭದಲ್ಲಿ ಅಷ್ಟೊಂದು ಜನಸಂಖ್ಯೆ ಕೊಡಗಿನಲ್ಲಿ ಇತ್ತೇ? ಆ ಸಂದರ್ಭದಲ್ಲ ಆ ಪ್ರಾಂತ್ಯದಲ್ಲಿ ಅಷ್ಟೊಂದು ಜನಸಂಖ್ಯೆಯೇ ಇರಲಿಲ್ಲ. ಸುಳ್ಳನ್ನು ಹೇಳುವುದು, ಇತಿಹಾಸವನ್ನು ತಿರುಚುವ ಕೆಲಸವನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮಾಡುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನದ್ದು ಗಾಂಧಿ ತತ್ವ, ಹಾಗಿದ್ದಲ್ಲ ಬಿಜೆಪಿಯ ತತ್ವ ಯಾವುದ್ದು? ಒಂದು ದೇಶ, ಒಂದು ಚುನಾವಣೆ ಬೇಕು ಎಂದು ಬಿಜೆಪಿ ಹೇಳುತ್ತಿದೆ. ಹಿಟ್ಲರ್ ಸಹ ಒಂದು ದೇಶ, ಒಂದು ಜನಾಂಗ, ಒಂದು ಪಕ್ಷ, ಒಬ್ಬನೇ ನಾಯಕ ಎಂದು ಹೇಳುತ್ತಿದ್ದ. ಬಿಜೆಪಿ ಹಿಟ್ಲರ್ ಮಾದರಿಯನ್ನು ಅನುಸರಿಸುತ್ತಿದೆ ಎಂದು ಟೀಕಿಸಿದರು.

ಈ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕರಾದ ಕೆ.ಹರೀಶ್ ಗೌಡ, ಡಿ. ರವಿಶಂಕರ್, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಡಿ. ತಿಮ್ಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತಿಷ್, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಜೆ. ವಿಜಯ ಕುಮಾರ್, ನಗರ ಘಟಕದ ಆರ್. ಮೂರ್ತಿ ಇದ್ದರು.

ಖಾಲಿ ಕುರ್ಚಿಗೆ ಭಾಷಣ

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಶುರು ಮಾಡುವಾಗ ಮಧ್ಯಾಹ್ನ 1 ಗಂಟೆ ಕಳೆದಿತ್ತು. ಅವರು ಒಟ್ಟು 50 ನಿಮಿಷ ಭಾಷಣ ಮಾಡಿದರು. ಅವರ ಭಾಷಣವನ್ನು ಸುಮಾರು ಅರ್ಧ ಗಂಟೆ ಕೇಳಿಸಿಕೊಂಡ ಜನರು ನಂತರ ಹೊಟ್ಟೆ ಹಸಿವಿನ ಕಾರಣದಿಂದ ಹೊರ ನಡೆದರು. ಜನರು ಹೊರ ನಡೆದರೂ ಸಿದ್ದರಾಮಯ್ಯ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಿದರು.