ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಭಾನುವಾರ ಸ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಮಠದ ಮುಂಭಾಗದಲ್ಲಿ ಭಾಗವತ್ ಅವರನ್ನು ವಾದ್ಯ, ಚಂಡೆವಾದನ ಮಂತ್ರಘೋಷ ಸಹಿತ ಮಠದ ಸಾಂಪ್ರದಾಯಿಕ ಗೌರವಗಳೊಂದಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.
ಬಳಿಕ ಗೀತಾಮಂದಿರದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಶ್ರೀಗಳು ಹಿಂದು ಸಾಮ್ರಾಟ್ ಎಂಬ ಬಿರುದು ಹಾಗೂ ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ ಸಹಿತ ಸನ್ಮಾನಿಸಿದರು.
ವರ್ತಮಾನದಲ್ಲಿ ದೇಶ ಮತ್ತು ಬಾಂಗ್ಲಾ ಮೊದಲಾದೆಡೆಗಳಲ್ಲಿ ನಡೆಯುತ್ತಿರುವ ಹಿಂದು ವಿರೋಧಿ ವಿದ್ಯಮಾನಗಳ ಕುರಿತಾಗಿಯೂ ಶ್ರೀಗಳು ಮತ್ತು ಭಾಗವತ್ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ ಎಸ್ ಎಸ್ ಮುಖ್ಯಸ್ಥರು, ಸನಾತನ ಧರ್ಮದ ರಕ್ಷಣೆ ಪೋಷಣೆ ಸಂವರ್ಧನೆಯ ವಿಚಾರದಲ್ಲಿ ಪ್ರತಿಯೊಬ್ಬ ಹಿಂದು ಶೂನ್ಯ ಸಹಿಷ್ಣುವಾಗಿರಬೇಕು ಮತ್ತು ಸಮಸ್ತ ಸಾಧು ಸಂತ ಸಮಾಜ ಹಿಂದೆಂದಿಗಿಂತ ಹೆಚ್ಚು ಸಮರ್ಥವಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಮಾರ್ಗದರ್ಶನ ನೀಡಬೇಕೆಂದು ಅನಿಸಿಕೆ ವ್ಯಕ್ತ ಪಡಿಸಿದರು.
ಶತಮಾನದ ಹೊಸ್ತಿಲಲ್ಲಿರುವ ಸಂಘವು ದೇಶದಲ್ಲಿ ಸನಾತನ ಧರ್ಮದ ಅಸ್ಮಿತೆಯನ್ನು ಸಂರಕ್ಷಿಸುವಲ್ಲಿ ನೀಡುತ್ತಿರುವ ಕೊಡುಗೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಶ್ರೀಗಳು, ಸಂಘವಿಲ್ಲದಿದ್ದರೆ ಹಿಂದೂಗಳು ದೇಶದಲ್ಲಿ ಮತ್ತಷ್ಟು ಬವಣೆಗಳನ್ನು ಅನುಭವಿಸಬೇಕಾದ ಸಂಭವ ಇತ್ತು .ಆದರೆ ಹೆಡಗೇ ವಾರರಿಂದ ಭಾಗವತ್ ರ ತನಕ ಸಂಘವನ್ನು ಮುನ್ನಡೆಸಿದ ಸಮಸ್ತ ನೇತಾರರೂ ತಮ್ಮ ರಾಷ್ಟ್ರೀಯ ಬದ್ಧತೆ ಹಾಗೂ ತ್ಯಾಗಪೂರ್ಣ ಬದುಕಿನಿಂದ ಅಸಂಖ್ಯ ಜನರಲ್ಲಿ ರಾಷ್ಟ್ರ ಭಕ್ತಿಯ ತೇಜಸ್ಸನ್ನು ಜಾಗೃತಗೊಳಿಸಿದ ಪರಿ ಅನನ್ಯ ಮತ್ತು ಅದ್ಭುತ ಎಂದೂ ಬಣ್ಣಿಸಿದರು.
ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಸಂಘದ ಹಿರಿಯ ಮುಖಂಡ ಮುಕುಂದ್, ಮಠದ ದಿವಾನ ಎಂ ನಾಗರಾಜ ಆಚಾರ್ಯ ,ಮಟ್ಟಿ ಲಕ್ಷ್ಮಿನಾರಾಯಣ ರಾವ್,ಪ್ರಮೋದ್ ಸಾಗರ್ ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು.