ನ್ಯಾಮತಿ: ರಕ್ತದಾನ ಮಾಡುವ ಬಗ್ಗೆ ಯಾವುದೇ ತಪ್ಪು ಕಲ್ಪನೆ ಬೇಡ, ನಿಮ್ಮ ರಕ್ತ ಮತ್ತೊಬ್ಬರ ಅಮೂಲ್ಯ ಪ್ರಾಣ ಉಳಿಸುತ್ತದೆ ಎಂದು ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ ಮಾರುತಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಹಿನ್ನೆಲೆಯಲ್ಲಿ ಚೇತನ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ರಕ್ತದಾನ ಮಾಡುವುದು ಒಂದು ಸಮಾಜಮುಖಿ ಕಾರ್ಯ ಎಂದರೆ ತಪ್ಪಾಗಲಾರದು. ಶಿಬಿರದ ಮೂಲಕ ಸಂಗ್ರಹಿಸಿದ ರಕ್ತ ಎಷ್ಟೋ ಬಡ ರೋಗಿಗಳ ಪ್ರಾಣ ಉಳಿಸುತ್ತದೆ. ರಕ್ತದಾನ ಮಾಡುವುದಕ್ಕೆ ಯಾರೂ ಹಿಂದೇಟು ಹಾಕಬೇಡಿ ಎಂದರು.
ಪತ್ರಕರ್ತ ಶ್ರೀನಿವಾಸ್ ಮಾತನಾಡಿ, ರಕ್ತದಾನಿಗಳು ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎಂಬ ತಪ್ಪು ಮಾಹಿತಿ ಸಮಾಜಕ್ಕೆ ಹೋಗುತ್ತಿದೆ, ಈ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ. ಯುವಕರು ಇದನ್ನು ಸಮಾಜಸೇವೆ ಎಂದೇ ತಿಳಿಯಬೇಕು ಎಂದರು.
25 ಜನರು ರಕ್ತದಾನ ಮಾಡಿದರು. ಸಂಘದ ಪ್ರಮುಖರಾದ ಜಯಣ್ಣ, ಅಭಿಷೇಕ್ ರೆಡ್ಡಿ, ಕಾರ್ತಿಕ್, ನ್ಯಾಮತಿ ಪಟ್ಟಣದ ಪ್ರಮುಖರಾದ ವಿರೇಶ್, ಲಿಂಗರಾಜ್, ಚಿಲೂರಿನ ಗಿರೀಶ್ ಹಾಗೂ ಇತರರು ಇದ್ದರು.