ಜಿಲ್ಲೆ

ಸಿಎಎ ವಿರೋಧದಲ್ಲಿ ಜಿಹಾದಿ, ವಿದೇಶಿ ಶಕ್ತಿಗಳು ಕೈವಾಡವಿದೆ ಎಂದು ಆರೆಸ್ಸೆಸ್​ನ ಭಯ್ಯಾಜಿ ಜೋಶಿ ಆರೋಪ

Mandara

ಬೆಂಗಳೂರು: ರಾಷ್ಟ್ರೀಯ ವಿಚಾರವಾದ ಸಿಎಎ ಇದೀಗ ಕೆಲವು ನಾಯಕರ ಕಾರಣಕ್ಕೆ ರಾಜಕೀಯವಾಗಿದ್ದು, ಸಿಎಎ ಒಪ್ಪದ ರಾಜ್ಯಗಳನ್ನು ಮನವೊಲಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದು ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜಿ ಜೋಶಿ ಹೇಳಿದ್ದಾರೆ.

ಚನ್ನೇನಹಳ್ಳಿಯಲ್ಲಿ ನಡೆಯಬೇಕಿದ್ದ ಅಖಿಲ ಭಾರತೀಯ ಪ್ರತಿನಿಧಿ ಸಭೆ (ಎಬಿಪಿಎಸ್) ಕರೊನಾ ಕಾರಣಕ್ಕೆ ರದ್ದಾಗುವ ಮುನ್ನ ನಡೆದಿದ್ದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲ (ಎಬಿಕೆಎಂ) ಸಭೆಯಲ್ಲಿ ಕೈಗೊಂಡ ನಿರ್ಣಯ, ಕಳೆದ ವರ್ಷದ ವಾರ್ಷಿಕ ವರದಿ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ದೇಶದಲ್ಲಿ ಮತ್ತೊಂದು ದೇಶದ ನಾಗರಿಕರು ತಮಗಿಷ್ಟ ಬಂದಂತೆ ಉಳಿಯಲು ಸಾಧ್ಯವಿಲ್ಲ. ಕೆಲವು ನಿಯಮ ಪಾಲನೆ ಮಾಡಬೇಕಾಗುತ್ತದೆ. ಅದೇ ರೀತಿ ಭಾರತಕ್ಕೆ ವಿದೇಶಿಯರು ಆಗಮಿಸಿದರೆ ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದರ ಕುರಿತು ಕೇಂದ್ರ ಉತ್ತಮ ನಿರ್ಧಾರ ಕೈಗೊಂಡಿದೆ. ಆದರೆ, ಕೆಲ ನಾಯಕರು ಉದ್ದೇಶಪೂರ್ವಕವಾಗಿ ಸಿಎಎ ವಿಚಾರವನ್ನು ರಾಜಕೀಯಗೊಳಿಸಿದ್ದಾರೆ. ಸಿಎಎ ವಿರೋಧವಷ್ಟೇ ಹೆಚ್ಚು ಪ್ರಚಾರ ಪಡೆಯುತ್ತಿದ್ದು, ಸಿಎಎ ಪರವಾಗಿಯೂ ದೇಶದಲ್ಲಿ ಬಹುದೊಡ್ಡ ಶಕ್ತಿ ಇದೆ ಎಂಬುದನ್ನು ತಿಳಿಯಬೇಕು. ಎನ್​ಡಿಎ ಆಡಳಿತದ ಬಿಹಾರ ಸೇರಿ ಸಿಎಎ ಜಾರಿ ಮಾಡುವುದಿಲ್ಲ ಎಂದು ನಿರ್ಧರಿಸಿರುವ ರಾಜ್ಯಗಳ ಮನವೊಲಿಸುವುದು ಕೇಂದ್ರ ಸರ್ಕಾರದ ಕರ್ತವ್ಯ ಎಂದರು. ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ್​ಕುಮಾರ್ ಉಪಸ್ಥಿತರಿದ್ದರು.

3 ಸಾವಿರ ಶಾಖೆ ಹೆಚ್ಚಳ: ಕಳೆದ ವರ್ಷಕ್ಕೆ ಹೋಲಿಸಿದರೆ ದಿನನಿತ್ಯ ನಡೆಯುವ ಶಾಖೆಗಳ ಸಂಖ್ಯೆ 3 ಸಾವಿರ ಹೆಚ್ಚಳವಾಗಿದೆ ಎಂದು ಭಯ್ಯಾಜಿ ಜೋಶಿ ತಿಳಿಸಿದರು. ದೇಶಾದ್ಯಂತ 39 ಸಾವಿರ ಸ್ಥಳಗಳಲ್ಲಿ 62,500 ಶಾಖೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಸಿಎಎ ವಿರೋಧದಲ್ಲಿ ವಿದೇಶಿ ಶಕ್ತಿ: ಎಬಿಕೆಎಂನಲ್ಲಿ ಕೈಗೊಂಡಿರುವ ಮೂರು ನಿರ್ಣಯಗಳ ಕುರಿತು ಭಯ್ಯಾಜಿ ಜೋಶಿ ಮಾಹಿತಿ ನೀಡಿದರು. ಮೂರು ದೇಶಗಳಲ್ಲಿ ನಿರಾಶ್ರಿತರಾಗಿರುವವರಿಗೆ ಆಶ್ರಯ ನೀಡುವುದು ಕಾಯ್ದೆಯ ಉದ್ದೇಶ ಎಂದರು. ಒಂದು ಗುಂಪಿನ ಜನರ ಮನಸ್ಸಿನಲ್ಲಿ ಕಾಲ್ಪನಿಕ ಭಯ ಮತ್ತು ಗೊಂದಲದ ವಾತಾವರಣವನ್ನು ಸೃಷ್ಟಿಸುವ ಮೂಲಕ ಜಿಹಾದಿ ಮತ್ತು ಎಡಗುಂಪುಗಳು ಸ್ವಾರ್ಥಿ ರಾಜಕೀಯ ಪಕ್ಷಗಳ ಮತ್ತು ಕೆಲವು ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ಹಿಂಸಾಚಾರ ಮತ್ತು ಅರಾಜಕತೆಯನ್ನು ಹರಡಲು ದುಷ್ಟ ಪ್ರಯತ್ನಗಳನ್ನು ಮಾಡುತ್ತಿವೆ. ರಾಷ್ಟ್ರೀಯ ಸಮಗ್ರತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿರುವ ಈ ಶಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ. ಜಮ್ಮು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಕುರಿತು ಎರಡನೇ ನಿರ್ಣಯ ಕೈಗೊಳ್ಳಲಾಗಿದ್ದು, ಭಾರತದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದ ನಿಯಮದಿಂದ ರಾಜ್ಯವನ್ನು ಹೊರತರುವ ಮೂಲಕ ಜಮ್ಮು ಕಾಶ್ಮೀರವನ್ನು ನಿಜ ಅರ್ಥದಲ್ಲಿ ಭಾರತದೊಂದಿಗೆ ಜೋಡಿಸಿರುವ ಕೇಂದ್ರ ಸರ್ಕಾರಕ್ಕೆ, ಈ ನಿಟ್ಟಿನಲ್ಲಿ ಪ್ರಬುದ್ಧತೆ ತೋರಿದ ಎಲ್ಲ ರಾಜಕೀಯ ಪಕ್ಷಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ. ರಾಮಜನ್ಮಭೂಮಿ ಕುರಿತ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿ ಮೂರನೇ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಆರೆಸ್ಸೆಸ್ ಇತಿಹಾಸದಲ್ಲೇ ಮೊದಲು: ಆರೆಸ್ಸೆಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ನಿರ್ಧಾರವಾಗಿದ್ದ ಎಬಿಪಿಎಸ್ ರದ್ದುಪಡಿಸಲಾಗಿದೆ ಎಂದು ಭಯ್ಯಾಜಿ ಜೋಶಿ ಹೇಳಿದರು. 1975ರಲ್ಲಿ ಹಾಗೂ 1992ರಲ್ಲಿ ವಿವಿಧ ಕಾರಣಕ್ಕೆ ಎಬಿಪಿಎಸ್ ನಡೆಸಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಹಾಗೂ ಸರ್ಕಾರದ ನಿರ್ದೇಶನವೂ ಇದ್ದದ್ದರಿಂದ ರದ್ದುಪಡಿಸಲಾಗಿದೆ. ಎಬಿಪಿಎಸ್ ರೀತಿಯಲ್ಲೆ ಅರೆಸ್ಸೆಸ್ ಸಾಂವಿಧಾನಿಕ ಮಾನ್ಯತೆ ಇರುವ ಎಬಿಕೆಎಂನಲ್ಲಿ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

18-22 ವಯಸ್ಸಿನ 1 ಲಕ್ಷ ಸ್ವಯಂಸೇವಕರನ್ನು ದೇಶಾದ್ಯಂತ ಆಯ್ಕೆ ಮಾಡಲಾಗಿದೆ. ಇವರು ಕುಟುಂಬ ವ್ಯವಸ್ಥೆ ಸರಿಪಡಿಸಲು, ಪರಿಸರ ಸಂರಕ್ಷಣೆ, ಸಾಮಾಜಿಕ ಸಮರಸ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. | ಭಯ್ಯಾಜಿ ಜೋಶಿ https://www.vijayavani.net/bengaluru-super-markets-will-be-open-during-corona/ https://www.vijayavani.net/organized-struggle-of-saarc-countries-against-coronavirus/