ಮಂಗಳೂರು : ಒಎಲ್‌ಎಕ್ಸ್ ನಲ್ಲಿ ಬೈಕ್ ಮಾರಾಟಕ್ಕೆ ಇದೆ ನಂಬಿಸಿ 5.58 ಲಕ್ಷ ರೂ. ವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಿಗೆ ಮಗ ಬೈಕ್ ಕೊಡಿಸುವಂತೆ ಹೇಳಿದ್ದಾರೆ. ಅದರಂತೆ ಒಎಲ್‌ಎಕ್ಸ್ ನಲ್ಲಿ ಕಾಂಟಿನೆಂಟಲ್ ಜಿಟಿ 650 ಬೈಕ್ ಮಾರಾಟಕ್ಕೆ ಇರುವ ಮಾಹಿತಿ ತಿಳಿದು ಬಂದಿದೆ. ಅದರಲ್ಲಿ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ ತನ್ನ ಹೆಸರು ಸೈಯದ್ ತೌಸಿಫ್ ಪಾಷಾ, ಬೆಂಗಳೂರಿನ ವಿ.ವಿ.ಪುರಂ ನಲ್ಲಿ ಉಸ್ಮಾನ್ ಅಟೋ ಕನ್ಸಲ್‌ಟೆನ್ಸ್ ನಡೆಸುತ್ತಿರುವುದಾಗಿ ತಿಳಿಸಿದ್ದಾನೆ. ಬೈಕ್ ಗೆ 5 ಸಾವಿರ ರೂ. ವರ್ಗಾವಣೆ ಹಾಗೂ 10 ಸಾವಿರ ರೂ. ಕಮಿಷನ್ ಕೊಡಬೇಕು ಎಂದು ಹೇಳಿದ್ದಾನೆ.
ಅದರಂತೆ ಅವರ ಮಗ ಬೈಕ್ ಖರೀದಿಸಲು ಒಪ್ಪಿದ್ದು, ಪಾಷಾ 57 ಸಾವಿರ ರೂ. ಮುಂಗಡ ಕೊಡಬೇಕು ಎಂದು ಕೇಳಿದ್ದಾನೆ. ಅದರಂತೆ ಫೆ.18ರಂದು 57 ಸಾವಿರ ರೂ. ಹಣವನ್ನು ವರ್ಗಾಯಿಸಿದ್ದಾರೆ. ಬಳಿಕ ಆರೋಪಿಯು ತಿಳಿಸಿದಂತೆ ವಿವಿಧ ಖಾತೆಗಳಿಗೆ ಮಾ.4ರಿಂದ 5,58,710 ರೂ. ವರ್ಗಾವಣೆ ಮಾಡಿದ್ದಾರೆ. ಅನಂತರವೂ ಆತ ಹೆಚ್ಚಿನ ಹಣ ವರ್ಗಾಯಿಸುವಂತೆ ದೂರುದಾರರ ಮಗನಲ್ಲಿ ತಿಳಿಸಿದ್ದಾನೆ. ಆಗ ಬೈಕ್ ಮತ್ತು ಹಣದ ಕುರಿತು ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಹಾಗೂ ನಾನು ಯಾರು ಎಂದು ನಿಮಗೆ ತೋರಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಬಳಿಕ ಬೈಕ್ ಕೊಡದೆ ಹಾಗೂ ಹಣವನ್ನೂ ವಾಪಾಸು ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.