ಜಿಲ್ಲೆ

ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ.ಅನುದಾನ

ಕೋಲಾರ ಡೆಸ್ಕ್

ಕೆಜಿಎಫ್​: ಮಾರಿಕುಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 24 ಗ್ರಾಮಗಳಲ್ಲಿ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದ್ದು, ಕಾಮಗಾರಿ ಪ್ರಾರಂಭಗೊಂಡಿದೆ ಎಂದು ಶಾಸಕಿ ರೂಪಕಲಾ ಹೇಳಿದರು.

ತಾಲೂಕಿನ ಮಾರಿಕುಪ್ಪ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕುಮಟ್ಟದ ಅಧಿಕಾರಿಗಳನ್ನು ನಿಮ್ಮ ಗ್ರಾಮಗಳಿಗೆ ಕರೆದುಕೊಂಡು ಬಂದಿದ್ದು, ನಿಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ತಿಳಿಸಿ, ಬಗೆಹರಿಸಿಕೊಳ್ಳಿ ಎಂದರು.

ಪಾರಂಡಹಳ್ಳಿಯಿಂದ ಕಬಂಪಲ್ಲಿ, ದಯಮಾನಗುಡಿಸಲು, ಎಂ.ಕೊತ್ತೂರು ಮಾರ್ಗವಾಗಿ ಮಾರಿಕುಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗಾಗಿ 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಕೆರೆ ಒತ್ತುವರಿ, ರೇಷನ್​ ಕಾರ್ಡ್​, ಕಾರ್ಮಿಕರು ಇಲಾಖೆಯಲ್ಲಿ ಆಗಬೇಕಾದ ಕೆಲಸಗಳ ಕುರಿತು ಅಹವಾಲು ಸಲ್ಲಿಸಿದರೆ ಸ್ಥಳದಲ್ಲೇ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ಈಗಾಗಲೇ ಪ್ರತಿ ಗ್ರಾಮಗಳಲ್ಲಿ ಬೀದಿದೀಪ ಹಾಗೂ ಮೂಲ ಸಮಸ್ಯೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ಸರ್ಕಾರಿ ಜಾಗ ಗುರುತಿಸಿ ಜಮೀನು ಅಭಿವೃದ್ಧಿಪಡಿಸಲು ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರ ಜಮೀನು ಅಭಿವೃದ್ಧಿಪಡಿಸಲಿದ್ದಾರೆ. ಈಗಾಗಲೇ ಖಾಸಗಿ ಕಂಪನಿಯೊಂದು ತಮ್ಮ ಘಟಕವನ್ನು ಪ್ರಾರಂಭಿಸಲು ಸ್ಥಳ ಪರಿವೀಕ್ಷಣೆ ಮಾಡಿದ್ದು, ಆಸಕ್ತಿಯಿಂದ ಇದ್ದಾರೆ. ಇದರಿಂದ ನೂರಾರು ಯುವಕರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದರು.

ಮಾಜಿ ಸದಸ್ಯ ಪುರುಷೋತ್ತಮರೆಡ್ಡಿ, ಗ್ರಾಪಂ ಮಾಜಿ ಅಧ್ಯೆ ಜಲಜಾಕ್ಷಿ, ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣಾರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ಇಒ ವೆಂಕಟೇಶಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಗದೀಶ್​, ತಹಸೀಲ್ದಾರ್​ ನಾಗವೇಣಿ ಇದ್ದರು.