ಜಿಲ್ಲೆ

5.5 ಕೋಟಿ ರೂ. ಪರಿಹಾರ ಪಾವತಿ ಬಾಕಿ

Haveri - Desk - Ganapati Bhat

ಸಂತೋಷ ವೈದ್ಯ ಹುಬ್ಬಳ್ಳಿ

ಉಣಕಲ್ಲ ಕ್ರಾಸ್​ನಿಂದ-ಸಾಯಿನಗರ ವೃತ್ತದವರೆಗೆ ಸಿಸಿ (ಸಿಮೆಂಟ್ ಕಾಂಕ್ರೀಟ್) ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು ಎರಡೂವರೆ ವರ್ಷಗಳೇ ಕಳೆದರೂ ಅರ್ಧದಷ್ಟು ಪ್ರಗತಿ ಕಂಡಿಲ್ಲ. ಇದರಿಂದ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಒಂದೂವರೆ ಕಿ.ಮೀ. ಉದ್ದದ ರಸ್ತೆ ಮಾರ್ಗವು ಯುದ್ಧಪೀಡಿತ ಪ್ರದೇಶದಂತೆ ಕಾಣುತ್ತಿದೆ. ಬಹುತೇಕ ಕಡೆ ರಸ್ತೆ ಡಾಂಬರ್ ಅಗೆದು ಹಾಗೆಯೇ ಬಿಡಲಾಗಿದೆ. ಗಟಾರ, ಕಾಂಪೌಂಡ್ ಗೋಡೆ ಧ್ವಂಸಗೊಳಿಸಿ ಅವಶೇಷಗಳನ್ನು ಅಲ್ಲಿಯೇ ರಾಶಿ ಹಾಕಲಾಗಿದೆ. ಗಟಾರ ನೀರು ಹರಿದು ಹೋಗಲಾಗದೇ ಅಲ್ಲಲ್ಲಿ ಸಂಗ್ರಹವಾಗಿದೆ. ಒಳಚರಂಡಿ ನೀರು ಎಲ್ಲಿಬೇಕೆಂದರಲ್ಲಿ ಮುಕ್ತವಾಗಿ ಹರಿಯುತ್ತಿದೆ. ಇವೆಲ್ಲ ಅಸಹ್ಯಗಳ ನಡುವೆಯೂ ಓಡಾಡಬೇಕಾದ ಅನಿವಾರ್ಯತೆ ಜನರದ್ದು. ಸಿಸಿ ರಸ್ತೆ ಮಾಡಿಕೊಡುತ್ತೇವೆ, ಒಂದಿಷ್ಟು ವರ್ಷ ತೊಂದರೆಗಳನ್ನು ಅನುಭವಿಸಿ ಎಂಬಂತಿದೆ ಅಧಿಕಾರಿಗಳ ಧೋರಣೆ.

ಉಣಕಲ್ಲ ಕ್ರಾಸ್​ನಿಂದ ಸಾಯಿನಗರ ಮೊದಲ ಬಸ್ ಸ್ಟಾಪ್​ವರೆಗೆ ಸಿಮೆಂಟ್ ಕಾಂಕ್ರೀಟ್ ಹಾಕಲಾಗಿದೆ. ಸಾಯಿನಗರ ಮೊದಲ ಬಸ್ ಸ್ಟಾಪ್​ನಿಂದ ಸಿದ್ದಪ್ಪಜ್ಜನ ಗುಡಿಯವರೆಗೆ ಯಾವುದೇ ಕೆಲಸ ನಡೆದಿಲ್ಲ. ಮೊದಲಿದ್ದ ಡಾಂಬರ್ ರಸ್ತೆ ಇನ್ನಷ್ಟು ದುಸ್ಥಿತಿಗೆ ತಲುಪಿದೆ. ರಾಚಯ್ಯ ಚನ್ನಯ್ಯ ಚಿಕ್ಕಮಠ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಎದುರು ನೀರಿನ ಟ್ಯಾಂಕ್ ಬಿಟ್ಟು ಸಿಸಿ ರಸ್ತೆ ಮಾಡಲಾಗಿದೆ. ಶ್ರೀ ಸಿದ್ದಪ್ಪಜ್ಜನವರ ಪಾದಗಟ್ಟಿಯಿಂದ ಸಾಯಿನಗರ ವೃತ್ತದವರೆಗೆ ಸಿಮೆಂಟ್ ಕಾಂಕ್ರೀಟ್ ಆಗಿದ್ದರೂ ಮಧ್ಯದಲ್ಲಿ ರಸ್ತೆ ವಿಭಜಕಕ್ಕೆ ಜಾಗ ಬಿಟ್ಟಿಲ್ಲ. ಸಂಪೂರ್ಣ ರಸ್ತೆ ಉದ್ದಕ್ಕೂ ಹಳೇ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸದೇ ಸಿಮೆಂಟ್ ರಸ್ತೆ ನಿರ್ವಿುಸಲಾಗಿದೆ.

160 ಆಸ್ತಿಗಳು ಸ್ವಾಧೀನ

ಈ ಪ್ರದೇಶದಲ್ಲಿ ಸುಸಜ್ಜಿತ ರಸ್ತೆ ನಿರ್ವಿುಸಬೇಕೆಂಬ ಬೇಡಿಕೆಯೂ ಸ್ಥಳೀಯರಿಂದ ಇರಲಿಲ್ಲ. ಹುಬ್ಬಳ್ಳಿಯಲ್ಲಿ ಎಲ್ಲಿಯೂ ಕೇಂದ್ರ ರಸ್ತೆ ನಿಧಿ (ಸಿಆರ್​ಆಫ್) ಅನುದಾನದಡಿ ಭೂಸ್ವಾಧೀನ ಪ್ರಕ್ರಿಯೆ ಜರುಗಿಸಿಲ್ಲ. ಇಲ್ಲಿ 160 ಆಸ್ತಿ (ಮನೆ, ವಾಣಿಜ್ಯ ಕಟ್ಟಡ, ಖಾಲಿ ಜಾಗ)ಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ 72 ಆಸ್ತಿಗಳ ಮಾಲೀಕರಿಗೆ 4.90 ಕೋಟಿ ರೂ. ಪರಿಹಾರ ನೀಡಲಾಗಿದೆ. ಇನ್ನು 88 ಜನ ಮಾಲೀಕರಿಗೆ 5.50 ಕೋಟಿ ರೂ. ಪರಿಹಾರ ಮೊತ್ತ ಪಾವತಿಸುವುದು ಬಾಕಿ ಇದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸ್ವಂತ ನಿಧಿಯಿಂದ ಒಟ್ಟು ಪರಿಹಾರ ಮೊತ್ತ ಪಾವತಿಸಬೇಕು. ಬಾಕಿ ಇರುವ 5.50 ಕೋಟಿ ರೂ. ಪರಿಹಾರ ಪಾವತಿಸಲು ಪಾಲಿಕೆ ಹೆಣಗಾಡುತ್ತಿದೆ. ಪರಿಹಾರ ಮೊತ್ತ ಪಾವತಿಸಲು ವಿಳಂಬವಾಗಿರುವುದರಿಂದ ಸ್ವಾಧೀನಕ್ಕೆ ಒಳಪಟ್ಟ ಆಸ್ತಿಗಳ ಮಾಲೀಕರು ಜಾಗ ಖಾಲಿ ಮಾಡಲು ಹಿಂದೇಟು ಹಾಕಿರುವುದು ಸಹಜ. ಇದರಿಂದ ರಸ್ತೆ ನಿರ್ಮಾಣ ಕಾಮಗಾರಿ ಪ್ರಗತಿ ಕಾಣುತ್ತಿಲ್ಲ.

20 ಕೋಟಿ ರೂ. ವೆಚ್ಚ

ಉಣಕಲ್ಲ ಕ್ರಾಸ್​ನಿಂದ ಸಾಯಿನಗರ ವೃತ್ತದವರೆಗೆ 1.3 ಕಿಲೋ ಮೀಟರ್ ಸಿಸಿ ರಸ್ತೆಯ ಅಗಲ 16.5 ಮೀಟರ್ (ದ್ವಿಪಥ). ಸಾಯಿನಗರ ವೃತ್ತದಿಂದ ಚರ್ಚ್​ವರೆಗೆ 13.5 ಮೀಟರ್ ಅಗಲ, ಪ್ರೆಸಿಡೆಂಟ್ ಹೋಟೆಲ್ ಹಾಗೂ ಹೆಬ್ಬಳ್ಳಿ ರಸ್ತೆಯವರೆಗೆ 9.5 ಮೀಟರ್ ಅಗಲ ಇರಲಿದೆ. ಇದರ ಒಟ್ಟು ವೆಚ್ಚ 20 ಕೋಟಿ ರೂ.

ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದೆ. ಇದರಿಂದ ಉಣಕಲ್ಲ ಕ್ರಾಸ್​ನಿಂದ ಸಾಯಿನಗರ 1ನೇ ಸ್ಟಾಪ್ ಹಾಗೂ 2ನೇ ಸ್ಟಾಪ್​ವರೆಗೆ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಈ ಭಾಗದ ಜನರು ಬಸ್, ಆಟೋ ರಿಕ್ಷಾ ಹಿಡಿಯಲು ದೂರದವರೆಗೆ ನಡೆದುಕೊಂಡು ಹೋಗಬೇಕಿದೆ. ಬೈಕ್ ಸವಾರರು ಸುತ್ತಿ ಬಳಸಿ, ಇಲ್ಲವೇ ಇಕ್ಕಟ್ಟಾದ ಸ್ಥಳದಲ್ಲಿಯೇ ಓಡಾಡಬೇಕಾಗಿದೆ. ವ್ಯಾಪಾರ-ವಹಿವಾಟಿಗೂ ಸಮಸ್ಯೆಯಾಗಿದೆ. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. | ಬಸಣ್ಣ ಬಿದರಿಕೊಪ್ಪ, ಸ್ಥಳೀಯರು ನಗರದ ಜನನಿಬಿಡ ಪ್ರದೇಶದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ಭೂಸ್ವಾಧೀನ ಪ್ರಕ್ರಿಯೆ ಜರುಗಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸಿಸಿ ರಸ್ತೆ ಮಧ್ಯೆ ಬರುವ (ಈಗಾಗಲೇ ಬಂದಿರುವ) ವಿದ್ಯುತ್ ಕಂಬಗಳನ್ನು ನೆಲ ಸಮಾಂತರವಾಗಿ ಕಟ್ ಮಾಡಿ ತೆಗೆಯಲಾಗುತ್ತದೆ. ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿದ ಮೇಲೆ ಸಿಸಿ ರಸ್ತೆ ನಿರ್ಮಾಣ ಮಾಡುವುದಾದರೆ ಹಲವು ದಿನಗಳವರೆಗೆ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಬೇಕಾಗಿ ಬರುತ್ತದೆ. ರಸ್ತೆ ಮಧ್ಯೆ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿದ ಬಳಿಕ ಹಳೇ ಕಂಬಗಳನ್ನು ಸ್ಥಳಾಂತರಿಸಲಾಗುತ್ತದೆ. ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸದಸ್ಯ