ರಾಯಚೂರು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ವೇಳೆ ಮಾತ್ರ ಶ್ರೀಮಠಕ್ಕೆ ಕೇವಲ ಮೂರು ಕೋಟಿ ರೂ. ದಾಟುತ್ತಿದ್ದ ಆದಾಯ ಈಗ ತಿಂಗಳಿನಿಂದ ತಿಂಗಳಿಗೆ ಸಾರ್ವಕಾಲಿಕ ದಾಖಲೆ ಬರೆಯುತ್ತಿದೆ.
ಈ ಬಾರಿ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ರಾಯರ ದರ್ಶನ ಪಡೆದಿದ್ದಾರೆ. ಈ ಹಿನ್ನಲೆಯಲ್ಲಿ ಶ್ರೀಮಠದ ಇತಿಹಾಸದಲ್ಲಿ ಮೊದಲ ಬಾರಿಗೆ ಕಳೆದ 35 ದಿನಗಳಲ್ಲಿ 5.28 ಕೋಟಿ ರೂ. ಹುಂಡಿಗಳಲ್ಲಿ ಸಂಗ್ರಹವಾಗಿದ್ದು, ಇದರಿಂದ ಶ್ರೀಮಠದ ಆಡಳಿತ ಭಾರಿ ಆದಾಯ ಸಂಗ್ರಹವಾಗಿದೆ.
ಪ್ರತಿ ವರ್ಷ ಆರಾಧನೆ ವೇಳೆ ದೊರೆಯುತ್ತಿದ್ದ ಆದಾಯಕ್ಕಿಂತ ಇದೀಗ ತಿಂಗಳು 5.28 ಕೋಟಿ ರೂ. ಕಾಣಿಕೆಯ ಆದಾಯ ಹೆಚ್ಚಾಗುತ್ತಿದೆ. ಪ್ರತಿ ತಿಂಗಳು ಹುಂಡಿ ತೆರೆದು ಎಣಿಸಿದಾಗಲೆಲ್ಲ ಕಾಣಿಕೆಯ ಮೊತ್ತ ದಾಖಲೆಯ ಮಟ್ಟಕ್ಕೆ ಬಂದು ತಲುಪುತ್ತಿರುವುದು ರಾಯರ ಸನ್ನಿಧಾನಕ್ಕೆ ಭೇಟಿ ನೀಡುವವರ ಸಂಖ್ಯೆ ಏರುಮುಖವಾಗುತ್ತಿರುವುದನ್ನು ತೋರಿಸುತ್ತಿದೆ. ಬೇಸಿಗೆ ರಜೆ ಹಾಗೂ ಬಿರು ಬಿಸಿಲಿನಲ್ಲಿಯೂ ಈ ಬಾರಿ ಕಳೆದ 25 ದಿನಗಳಲ್ಲಿ 5.28 ಕೋಟಿ ರೂ.ರೂಪಾಯಿ ಭಕ್ತರಿಂದ ಕಾಣಿಕೆ ಸಂಗ್ರಹವಾಗಿದೆ. ಈ ಪೈಕಿ 5.13 ಕೋಟಿ ರೂ.ಮೌಲ್ಯದ ನೋಟುಗಳು, 15.34 ಲಕ್ಷದ ನಾಣ್ಯಗಳು, 43 ಗ್ರಾಂ ಚಿನ್ನಾಭರಣ, 1837 ಗ್ರಾಂ ಬೆಳ್ಳಿ ಆಭರಣಗಳು ಕಾಣಿಕೆ ಬಂದಿದೆ.
ಮಂತ್ರಾಲಯ ಕ್ಷೇತ್ರಕ್ಕೆ ವಿಶ್ವದಾದ್ಯಂತ ಭಕ್ತರಿದ್ದಾರೆ. ಅವರೆಲ್ಲರೂ ಈ ಮೊದಲು ಗುರುವಾರ ಮತ್ತು ವಾರದ ಕೊನೆಯ ಶನಿವಾರ ಮತ್ತು ಭಾನುವಾರ ಕ್ಷೇತ್ರಕ್ಕೆ ಆಗಮಿಸುತ್ತಿದ್ದರು. ಆದರೆ, ಇದೀಗ ದಿನವೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಮಂತ್ರಾಲಯ ಕ್ಷೇತ್ರಕ್ಕೆ ದೌಡಾಯಿಸುತ್ತಿದ್ದು ಭಕ್ತರ ಹರಿವಿನ ಜತೆಗೆ ಕಾಣಿಕೆಯ ಜೊತೆಗೆ ಬಂಗಾರ,ಬೆಳ್ಳೆಯನ್ನು ಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್ ತಿಳಿಸಿದ್ದಾರೆ.