ಪುತ್ತೂರು: ಪುತ್ತೂರಿನ ಶಿಕ್ಷಣ ಇಲಾಖೆ 1 ರೂಪಾಯಿಯ 3 ನಾಣ್ಯಗಳನ್ನು 30 ರೂಪಾಯಿ ಖರ್ಚು ಮಾಡಿ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿದೆ!
ಹೌದು. ಮಾಹಿತಿ ಹಕ್ಕು ಕಾಯ್ದೆಯಡಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೋರಿ ಕುಂಬ್ರದ ಶಿವಪ್ಪ ರಾಥೋಡ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಮಾಹಿತಿ ಪತ್ರದ ಪ್ರತಿಗೆ 62 ರೂ. ಶುಲ್ಕ ಪಾವತಿಸುವಂತೆ ಅರ್ಜಿದಾರನಿಗೆ ಇಲಾಖೆ ತಿಳಿಸಿತ್ತು. ಅರ್ಜಿದಾರ 65 ರೂ. ಪಾವತಿಸಿದ್ದರು. ಉಳಿಕೆ 3 ರೂ. ಚಿಲ್ಲರೆಯನ್ನು ಇಲಾಖೆ ವಾಪಸ್ ನೀಡಿರಲಿಲ್ಲ.
ಇದನ್ನು ಪ್ರಶ್ನಿಸಿ ಇಲಾಖೆಗೆ ಪತ್ರ ಬರೆದು, ಕಾನೂನು ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದ್ದರು. ತಕ್ಷಣ ಸ್ಪಂದಿಸಿದ ಇಲಾಖೆ, ರಾಥೋಡ್ ಅವರಿಗೆ ಲಕೋಟೆಯಲ್ಲಿ 1 ರೂ.ನ 3 ನಾಣ್ಯಗಳನ್ನು ತುಂಬಿಸಿ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿದೆ.