ಜಿಲ್ಲೆ

ಪಾಣಿಗಟ್ಟಿ-ಹುಲಗೂರ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ.

ಶಿಗ್ಗಾಂವಿ: ಹುಲಗೂರ ಜಿಪಂ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಮೊದಲ ಹಂತವಾಗಿ 3 ಕೋಟಿ ರೂ. ಅನುದಾನದಲ್ಲಿ ಪಾಣಿಗಟ್ಟಿ- ಹುಲಗೂರ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 58 ಲಕ್ಷ ರೂ.ಗಳಲ್ಲಿ ಪಾಣಿಗಟ್ಟಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.

ತಾಲೂಕಿನ ಹುಲಗೂರ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ನಿರ್ವಿುಸಲಾದ ಗ್ರಾಪಂ ಸಭಾಂಗಣ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ರಸ್ತೆಗಳ ಅಭಿವೃದ್ಧಿಯಿಂದ ಗ್ರಾಮಗಳ ಬೆಳವಣಿಗೆ ಮತ್ತು ವ್ಯಾಪಾರ-ವಹಿವಾಟುಗಳು ಹೆಚ್ಚಳವಾಗಲಿವೆ. ಈಗಾಗಲೇ ಪಾಣಿಗಟ್ಟಿ- ಹುಲಗೂರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ 18 ಲಕ್ಷ ರೂ. ವೆಚ್ಚದಲ್ಲಿ ನೂತನ ಸಭಾಂಗಣ ನಿರ್ವಿುಸಲಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಹುಲಗೂರ ಜಿಪಂ ಕ್ಷೇತ್ರ ಸೇರಿದಂತೆ ತಾಲೂಕಿನ ಎಲ್ಲ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿ ಲೋಕೋಪಯೋಗಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಲಾಗಿದೆ. ಈ ಭಾಗದಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಈಗಾಗಲೇ ಪಟ್ಟಿ ಮಾಡಿದ್ದೇನೆ. ಗ್ರಾಪಂಗಳ ಆಡಳಿತ ಮಂಡಳಿ ಮತ್ತು ಜನರು ನನ್ನೊಂದಿಗೆ ಕೈಜೋಡಿಸಿ ಸಹಕಾರ ನೀಡಿದಲ್ಲಿ ಸಮಸ್ಯೆಗಳ ಮುಕ್ತ ಕ್ಷೇತ್ರವನ್ನಾಗಿಸಲು ಶ್ರಮಿಸುತ್ತೇನೆ. ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಹುಲಗೂರ ಗ್ರಾಪಂ ಅಧ್ಯಕ್ಷ ಜಾವೇದ್ ಅಹ್ಮದ್ ಸವಣೂರ, ಗುಡ್ಡಪ್ಪ ಜಲದಿ, ಮಾಲತೇಶ ಸಾಲಿ, ಎಸ್.ಎಫ್. ಮಣಕಟ್ಟಿ, ಗ್ರಾಪಂ ಸದಸ್ಯರು, ಸ್ಥಳೀಯರು ಇದ್ದರು.