ಜಿಲ್ಲೆ

ಕಂಪೆನಿಯ ಎಂಡಿ ಹೆಸರಲ್ಲಿ 26 ಲಕ್ಷ ರೂ. ವಂಚನೆ

ಮಂಗಳೂರು: ಕಂಪೆನಿಯೊಂದರ ವ್ಯವಸ್ಥಾಪಕ ನಿರ್ದೇಶಕರ ಹೆಸರಿನಲ್ಲಿ ಅಕೌಂಟೆಂಟ್‌ಗೆ ವಾಟ್ಸಾಪ್ ಸಂದೇಶ ಕಳುಹಿಸಿ 26 ಲಕ್ಷ ರೂ. ವಂಚಿಸಿರುವ ಘಟನೆಗೆ ಸಂಬಂಧಿಸಿದಂತೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.15ರಂದು ಎಂಡಿ ಅರವಿಂದ ಕುಮಾರ್ ಹೆಸರಿನಲ್ಲಿ ಸಂಸ್ಥೆಯಲ್ಲಿ ಕೆಲಸ ಮಾಡುವ ಅಕೌಂಟೆಂಟ್ ಯುವತಿಯ ಮೊಬೈಲ್‌ಗೆ ಸಂದೇಶ ಬಂದಿದೆ. ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿ ನಾನು ಅರವಿಂದ ಕುಮಾರ್ ಇದು ನನ್ನ ಹೊಸ ವಾಟ್ಸಾಪ್ ಸಂಖ್ಯೆ ಸೇವ್ ಮಾಡಿ ಎಂದು ತಿಳಿಸಿದ್ದಾನೆ. ಪ್ರೊೈಲ್‌ನಲ್ಲಿ ಎಂಡಿಯ ಭಾವಚಿತ್ರವೂ ಇದ್ದುದರಿಂದ ಯುವತಿ ನಂಬಿ ಸೇವ್ ಮಾಡಿ ಇಟ್ಟಿದ್ದಾಳೆ.

ಜು.16ರಂದು ಅದೇ ನಂಬರ್‌ನಿಂದ ಕಂಪೆನಿಯ ಖಾತೆಯಲ್ಲಿ ಬಾಕಿ ಇರುವ ಮೊತ್ತ ಎಷ್ಟು ಎಂದು ಸಂದೇಶ ಬಂದಿದೆ. ಎಂಡಿಯವರೇ ಮಾಹಿತಿ ಕೇಳುತ್ತಿದ್ದಾರೆ ಎಂದು ನಂಬಿದ ಯುವತಿ ಖಾತೆಯಲ್ಲಿ ಬಾಕಿ ಇರುವ ಹಣದ ವಿವರವನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ಕೂಡಲೇ ಆತ ಬೇರೊಂದು ಪ್ರಾಜೆಕ್ಟ್‌ಗೆ ಮುಂಗಡ ಹಣ ಪಾವತಿ ಮಾಡಬೇಕಿರುವುದರಿಂದ ತಾನು ತಿಳಿಸುವ ಖಾತೆಗೆ 26 ಲಕ್ಷ ರೂ. ಪಾವತಿಸುವಂತೆ ಸಂದೇಶ ಕಳುಹಿಸಿದ್ದಾನೆ. ಇದನ್ನು ನಂಬಿದ ಯುವತಿ ಆತ ತಿಳಿಸಿದ ಖಾತೆಗೆ ಆರ್‌ಟಿಜಿಎಸ್ ಮೂಲಕ 26 ಲಕ್ಷ ರೂ. ವರ್ಗಾಯಿಸಿದ್ದಾಳೆ.

ಈ ವಿಚಾರ ಸಂಸ್ಥೆಯ ನೈಜ ಮ್ಯಾನೇಜಿಂಗ್ ಡೈರೆಕ್ಟರ್‌ಗೆ ತಿಳಿದು ಕರೆ ಮಾಡಿದಾಗ ಆನ್‌ಲೈನ್ ಮೂಲಕ ಮೋಸ ಹೋಗಿರುವುದು ಅರಿವಾಗಿದೆ. ಕೂಡಲೇ ಸೆನ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.