ಜಿಲ್ಲೆ

ಶಾಶ್ವತ ಪರಿಹಾರಕ್ಕೆ 200 ಕೋಟಿ ರೂ. ಅನುದಾನ ಬಿಡುಗಡೆ

ವಿಜಯವಾಣಿ ಸುದ್ದಿಜಾಲ ಧಾರವಾಡ

ಜಿಲ್ಲೆಯ ಬೆಣ್ಣಿಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆಗೆ ಅಗತ್ಯ ಯೋಜನೆ ಸಿದ್ಧಗೊಳಿಸಲಾಗಿದೆ. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲು ಆರಂಭಿಕವಾಗಿ 200 ಕೋಟಿ ರೂ. ಅನುದಾನ ಬಿಡುಗಡೆ ಆಗಿದೆ ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ನವಲಗುಂದ ತಾಲೂಕಿನ ವಿವಿಧೆಡೆ ಬುಧವಾರ ಸಂಚರಿಸಿದ ಅವರು ಬೆಣ್ಣಿಹಳ್ಳದ ನಾಲೆ ವೀಕ್ಷಿಸಿದ ನಂತರ ಅವರು ಮಾತನಾಡಿದರು.

ಬೆಣ್ಣಿಹಳ್ಳದಿಂದ ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ 6 ತಾಲೂಕುಗಳ 56 ಹಳ್ಳಿಗಳು ಬಾಽತವಾಗುತ್ತವೆ.2012ರಲ್ಲಿ ನೀರಾವರಿ ತಜ್ಞ ಡಾ. ಜಿ.ಎಸ್. ಪರಮಶಿವಯ್ಯ ಅವರು ತುಪ್ಪರಿಹಳ್ಳ ಮತ್ತು ಬೆಣ್ಣಿಹಳ್ಳದ ಪ್ರವಾಹ ನಿಯಂತ್ರಣ ಹಾಗೂ ನೀರಿನ ಸದ್ಬಳಕೆ ಕುರಿತು ನೀಡಿದ ಅಧ್ಯಯನ ವರದಿಯನ್ನು ಸರ್ಕಾರ ಪರಿಶೀಲಿಸಿದೆ. ಅದರ ಆಧಾರದ ಮೇಲೆ ನೀರಾವರಿ ನಿಗಮದ ವರದಿ ಪಡೆದು ಅನುಷ್ಠಾನಗೊಳಿಸುತ್ತದೆ ಎಂದರು.

ಸ್ಥಳೀಯ ಶಾಸಕ ಎನ್.ಎಚ್. ಕೋನರಡ್ಡಿ ಅವರ ನಿರಂತರ ಪ್ರಯತ್ನದಿಂದ ಮುಖ್ಯಮಂತ್ರಿಗಳು 2024- 25ನೇ ಸಾಲಿನ ಬಜೆಟ್‌ನಲ್ಲಿ 200 ರೂ. ಕೋಟಿ ರೂ. ಘೋಷಿಸಿ ಬಿಡುಗಡೆ ಮಾಡಿದ್ದಾರೆ. ಕಾಮಗಾರಿಗೆ ಟೆಂಡರ್ ಕರೆಯಲಾಗಿದ್ದು, ಅಂತಿಮ ಹಂತದಲ್ಲಿದೆ. ಮಳೆಗಾಲದ ನಂತರ ಕಾಮಗಾರಿ ಪ್ರಾರಂಭಿಸಲಾಗುತ್ತದೆ. ಯಮನೂರ ಸೇತುವೆ ಹತ್ತಿರ ಸಾರ್ವಜನಿಕರ ಹಾಗೂ ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮುಖ್ಯವಾಗಿ ಬೆಣ್ಣಿಹಳ್ಳ ದಡದಲ್ಲಿ ಸ್ನಾನಘಟ್ಟ, ಉತ್ತಮ ರಸ್ತೆ ನಿರ್ಮಾಣ, ಹಳ್ಳಕ್ಕೆ ಹೂಳು ಬರದಂತೆ ತಡೆಯಲು ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.

* ಜೀವ ರಕ್ಷಣೆ ಅಣಕು ಪ್ರದರ್ಶನ:

ಪ್ರವಾಹ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿರುವವರ ರಕ್ಷಣೆ ಕುರಿತು ನವಲಗುಂದದ ನೀಲಮ್ಮನ ಕೆರೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಅಣಕು ಪ್ರದರ್ಶನ ನೀಡಿದರು. ವೈದ್ಯರು ಜೀವರಕ್ಷಣೆಗೆ ನೀಡುವ ಚಿಕಿತ್ಸೆಯನ್ನು ವಿವರಿಸಿದರು.

ಶಾಸಕ ಎನ್.ಎಚ್. ಕೋನರಡ್ಡಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಅಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ದಿವ್ಯ ಪ್ರಭು, ಎಸ್‌ಪಿ ಡಾ. ಗೋಪಾಲ ಬ್ಯಾಕೋಡ, ತಹಸೀಲ್ದಾರರು, ನೀರಾವರಿ ಮತ್ತು ಆರೋಗ್ಯ ಇಲಾಖೆ ಅಽಕಾರಿಗಳಿದ್ದರು.