ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ವೀರಭದ್ರೇಶ್ವರ ದೇಗುಲದ ಮುಂಭಾಗದ ತೇರಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ದುಗ್ಗಹಟ್ಟಿ ಪಿ. ವೀರಭದ್ರಪ್ಪ ಇತರರು ಇದ್ದರು. 
ಜಿಲ್ಲೆ

ಗಂಗವಾಡಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ.

ಯಳಂದೂರು: ಗಂಗವಾಡಿ ಗ್ರಾಮದ ನೂರಾರು ವರ್ಷಗಳ ಇತಿಹಾಸ ಇರುವ ಶ್ರೀ ವೀರಭದ್ರೇಶ್ವರ ದೇಗುಲದ ಮುಂಭಾಗದ ತೇರಿನ ಬೀದಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.

ಈ ರಸ್ತೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ಇಲ್ಲಿನ ಭಕ್ತರ ಬಹುದಿನಗಳ ಬೇಡಿಕೆಯಾಗಿತ್ತು. ಹತ್ತಾರು ವರ್ಷಗಳಿಂದಲೂ ಇದು ಮರೀಚಿಕೆಯಾಗಿತ್ತು. ಈ ರಸ್ತೆ ಅಭಿವೃದ್ಧಿಗೆ 20 ಲಕ್ಷ ರೂ. ಬಿಡುಗಡೆಯಾಗಿದೆ. ದೇಗುಲದ ಎದುರಿಗಿರುವ ಬಸವನಗುಡಿಯ ಸುತ್ತ ರಸ್ತೆಯನ್ನು ಗುಣಮಟ್ಟದಿಂದ ಮಾಡಬೇಕು ಎಂದು ಕೆಆರ್‌ಐಡಿಎಲ್‌ನ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಅಲ್ಲದೆ ಹೊಂಗನೂರು, ಮಸಣಾಪುರ, ಕಳ್ಳೀಪುರ ಮಾರ್ಗವಾಡಿ ಮುಳ್ಳಬಸಪ್ಪ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸುವಂತೆ ದಶಕಗಳ ಬೇಡಿಕೆ ಇದೆ. ಈ ರಸ್ತೆ ತುಂಬ ಹದಗೆಟ್ಟಿದೆ. ಹಾಗಾಗಿ ಇದರ ಅಭಿವೃದ್ಧಿಗೆ ಪ್ರಥಮ ಹಂತವಾಗಿ ಮೆಟ್ಲಿಂಗ್ ಕಾಮಗಾರಿಗೆ 43 ಲಕ್ಷ ರೂ. ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು.

ಅಲ್ಲದೆ ಮುಂದಿನ ಹಂತದಲ್ಲಿ ಡಾಂಬರೀಕರಣಕ್ಕೆ 1 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು ಇದನ್ನೂ ಮಂಜೂರು ಮಾಡಿಸಿ ರಸ್ತೆ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು. ಅಲ್ಲದೆ ಗ್ರಾಮದ ವೀರಶೈವ ಹಾಗೂ ಒಕ್ಕಲಿಗರ ಬೀದಿಯ ರಸ್ತೆ ಅಭಿವೃದ್ಧಿಗೂ ಈಗ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ದೇಗುಲದ ಮುಖ್ಯಸ್ಥ ದುಗ್ಗಹಟ್ಟಿ ಪಿ. ವೀರಭದ್ರಪ್ಪ, ಇರಸವಾಡಿ ಗ್ರಾಪಂ ಅಧ್ಯಕ್ಷ ವಸಂತ, ಸದಸ್ಯ ನಾಗರಾಜು, ಕಾಳೇಗೌಡ, ರವಿಗೌಡ, ಕೆಆರ್‌ಐಡಿಎಲ್ ಎಇಇ ಮಾದಶೆಟ್ಟಿ, ನಿರ್ಮಿತಿ ಕೇಂದ್ರದ ಜೆಇ ನಂದೀಶ್, ಕಂದಹಳ್ಳಿ ನಂಜುಂಡಸ್ವಾಮಿ, ಹೊನ್ನೂರು ರಾಘವೇಂದ್ರ, ಶಿವರುದ್ರೇಗೌಡ, ರಾಚಯ್ಯ, ಗೋಪಾಲ, ಪುಟ್ಟಸ್ವಾಮಿ ಇತರರು ಇದ್ದರು.