ಜಿಲ್ಲೆ

ಇಬ್ಬರು ಆರೋಪಿಗಳು ದೋಷಮುಕ್ತ : ವ್ಯಾಪಾರಿಯಿಂದ 2.35 ಕೋಟಿ ರೂ ದರೋಡೆ ಪ್ರಕರಣ

ಇಂದಿರಾ ಎನ್ ಕೆ

ಮಂಗಳೂರು: ಲೇಡಿಹಿಲ್‌ನಿಂದ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ಅವರಲ್ಲಿದ್ದ 2 ಕೋಟಿ 35 ಲಕ್ಷ ರೂ ದರೋಡೆ ಮಾಡಿದ ಪ್ರಕರಣದಲ್ಲಿ ಆರೋಪಿಗಳಾದ ಅಬ್ದುಲ್ ಮುನಾಫ್ ಮತ್ತು ಮಹಮ್ಮದ್ ರಾಜಿಂ ಅವರನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದೋಷಮುಕ್ತಗೊಳಿಸಿದೆ. ಮಂಜುನಾಥ ಗಣಪತಿ ಪಾಲಿಕರ್ ಅವರು ಮಂಗಳೂರು ಕಾರ್‌ಸ್ಟ್ರೀಟ್‌ನಲ್ಲಿರುವ ವೈಷ್ಣವಿ ಚಿನ್ನಾಭರಣಗಳ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದರು.2018ರ ಅಕ್ಟೋಬರ್ 23ರಂದು ಅಂಗಡಿಯ ಮಾಲೀಕ ಸಂತೋಷ್ ಕುರ್ಡೆಕರ್ ಅವರು ಮಂಜುನಾಥ್ ಅವರಲ್ಲಿ ಚಿನ್ನದ ಗಟ್ಟಿಗಳನ್ನು ನೀಡಿ ಮುಂಬಯಿಗೆ ಕಳುಹಿಸಿದ್ದು ಅವರು ಚಿನ್ನದ ಗಟ್ಟಿಯನ್ನು ಮುಂಬಯಿಯ ಝವೇರಿ ಬಜಾರಿನಲ್ಲಿ ನೀಡಿ, 2.35 ಕೋಟಿ ರೂ ನಗದು ಪಡೆದುಕೊಂಡು ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಸ್‌ನಲ್ಲಿ ಮಂಗಳೂರಿಗೆ ಬಂದು ಲೇಡಿಹಿಲ್ ಬಳಿ ಇಳಿದು ಮಾಲೀಕರ ಅಂಗಡಿಗೆ ಹೋಗಲು ರಸ್ತೆ ದಾಟುವಷ್ಟರಲ್ಲಿ ಆರೋಪಿಗಳು ಮಂಜುನಾಥ ಗಣಪತಿ ಅವರನ್ನು ಇನ್ನೊವಾ ಕಾರಿನಲ್ಲಿ ಅಪಹರಿಸಿದ್ದರು ಎಂದು ದೂರಲಾಗಿತ್ತು.

ಆರೋಪಿಗಳು ಮಂಜುನಾಥ ಗಣಪತಿ ಅವರನ್ನು ಬಲತ್ಕಾರವಾಗಿ ಎಳೆದೊಯ್ದು, ಅವರ ಬಾಯಿಗೆ ಕರವಸ್ತ್ರ ಕಟ್ಟಿ, ಲಾಲ್‌ಭಾಗ್ - ಕುಂಟಿಕಾನ ಕಾವೂರಿನಿಂದಾಗಿ ಬಟ್ಟೆ ಪೇಟೆಯಿಂದ ಸುಮಾರು ಒಂದು ಕಿಲೋ ಮೀಟರ್ ಮುಂದೆ ಹೋಗಿ ಜನ ಸಂಚಾರ ಇಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿ ಹಣವಿದ್ದ ಬ್ಯಾಗನ್ನು ದರೋಡೆ ಮಾಡಿದ್ದಾರೆ ಎಂದು ಸೆಂಟ್ರಲ್ ಸಹಾಯಕ ಪೋಲಿಸ್ ಆಯುಕ್ತ ಭಾಸ್ಕರ್ ಒಕ್ಕಲಿ ಅವರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಬಳಿಕ ಪ್ರಕರಣದಲ್ಲಿ ವಶ ಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ತನಿಖೆಗಾಗಿ ಕಳುಹಿಸಲು ನ್ಯಾಯಾಲಯ ಆದೇಶ ನೀಡಿತ್ತು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಅಭಿಯೋಜನ ಪರವಾಗಿ ಸುಮಾರು ಹದಿನಾರು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು. ಅವರಲ್ಲಿ ಬೆರಳಚ್ಚು ತಜ್ಞರು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ನುಡಿದಿದ್ದರು. ಪ್ರಕರಣವನ್ನು ಆದಾಯ ತೆರಿಗೆ ಅಧಿಕಾರಿಗಳಿಗೆ ವರ್ಗಾಯಿಸಿದ ಬಗ್ಗೆ ಆದಾಯ ತೆರಿಗೆ ಇಲಾಖೆಯ ಸಹಾಯಕ ನಿರ್ದೇಶಕ ಶರೀಫ್ ರಶೀದ್ ಅವರನ್ನು ಸಾಕ್ಷಿ ವಿಚಾರಣೆಗೆ ಒಳಪಡಿಸಿದ್ದು, ಅವರೆಲ್ಲರೂ ಅಭಿಯೋಜನ ಪರ ಸಾಕ್ಷಿ ನುಡಿದಿದ್ದರು.

ಪ್ರಕರಣದಲ್ಲಿ ಸರ್ಕಾರ ಮತ್ತು ಆರೋಪಿಗಳ ಪರ ವಾದವನ್ನು ಆಲಿಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶಮಲ್ಲಿಕಾರ್ಜುನ ಸ್ವಾಮಿ ಅವರುಅಬ್ದುಲ್ ಮುನಾಫ್ ಮತ್ತು ಮಹಮ್ಮದ್ ರಾಜಿಂ ಮೇಲಿನ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ಹೇಳಿ ಇಬ್ಬರನ್ನೂ ಆರೋಪದಿಂದ ಮುಕ್ತಗೊಳಿಸಿದೆ.