ಪಾಂಡವಪುರ: ಪಟ್ಟಣ ಪುರಸಭೆ ಸದಸ್ಯರ ನಿಯೋಗ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ ಪಟ್ಟಣದ ಅಭಿವೃದ್ಧಿಗಾಗಿ ಕೇಂದ್ರದ ಸಿಎಸ್‌ಆರ್ ನಿಧಿಯಡಿ 175 ಕೋಟಿ ರೂ. ಅನುದಾನ ನೀಡುವಂತೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ಮನವಿ ಸಲ್ಲಿಸಿತು.
ದೆಹಲಿಯ ಪ್ರವಾಸ ಕೈಗೊಂಡಿರುವ ಜೆಡಿಎಸ್, ಬಿಜೆಪಿ, ಕಾಂಗ್ರೆಸ್-ರೈತಸಂಘ ಮೈತ್ರಿ ಮತ್ತು ಸರ್ಕಾರದ ನಾಮನಿರ್ದೇಶಿತ ಪುರಸಭೆ ಸದಸ್ಯರು ಮಂಗಳವಾರ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ, ಪಟ್ಟಣದ ವ್ಯಾಪ್ತಿಗೆ ಬರುವ ಸಂತೆ ಮೈದಾನದ ಸರ್ವತೋಮುಖ ಅಭಿವೃದ್ಧಿಗೆ 50 ಕೋಟಿ ರೂ., ಪುರಸಭೆಗೆ ಸೇರಿದ ಹಳೇ ಕಟ್ಟಡಗಳ ವಾಣಿಜ್ಯ ಮಳಿಗೆಗಳನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವುದಕ್ಕಾಗಿ 100 ಕೋಟಿ ರೂ. ಹಾಗೂ ಪಟ್ಟಣದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು 25 ಕೋಟಿ ರೂ. ಸೇರಿದಂತೆ 175 ಕೋಟಿ ರೂ. ಅಗತ್ಯವಿದ್ದು, ಕೇಂದ್ರದ ಸಿಎಸ್‌ಆರ್ ನಿಧಿಯಲ್ಲಿ ನೀಡುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯರ ವತಿಯಿಂದ ಪೌರ ಸನ್ಮಾನ ಸಮಾರಂಭ ನಡೆಸಲು ತೀರ್ಮಾನಿಸಲಾಗಿದ್ದು, ಕಾರ್ಯಕ್ರಮ ನಿಗದಿಗೆ ದಿನಾಂಕ ನೀಡಬೇಕೆಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದರು.
ಪುರಸಭೆ ಸರ್ವ ಪಕ್ಷದ ಸದಸ್ಯರ ಮನವಿ ಆಲಿಸಿದ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಪಾಂಡವಪುರ ಪಟ್ಟಣದ ಅಭಿವೃದ್ಧಿಗಾಗಿ ಅನುದಾನ ನೀಡುವಂತೆ ಸರ್ವ ಪಕ್ಷದ ಸದಸ್ಯರು ನೀಡಿರುವ ಮನವಿ ಪುರಸ್ಕರಿಸುವುದಾಗಿ ತಿಳಿಸಿ, ಮುಂದಿನ ದಿನಗಳಲ್ಲಿ ಪುರಸಭೆಗೆ ಅಗತ್ಯವಿರುವ ಅನುದಾನವನ್ನು ನೀಡಲಾಗುವುದು. ಜತೆಗೆ ಪೌರ ಸನ್ಮಾನ ಕಾರ್ಯಕ್ರಮಕ್ಕೂ ದಿನಾಂಕ ನೀಡಲಾಗುವುದು ಎಂದು ಭರವಸೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಉಪಾಧ್ಯಕ್ಷ ಎಲ್.ಅಶೋಕ್, ಅರ್ಚನಾ ಚಂದ್ರು, ಸದಸ್ಯರಾದ ಆರ್.ಸೋಮಶೇಖರ್, ಎಂ.ಗಿರೀಶ್, ಶಿವಣ್ಣ, ಕೃಷ್ಣ ಎ.ಅಣ್ಣಯ್ಯ, ಶಿವಕುಮಾರ್, ಚಂದ್ರು, ಇಮ್ರಾನ್, ಸರಸ್ವತಿ ಜಯರಾಮು, ಸುಧಾ ಜಯರಾಮು, ಮಂಗಳ, ಗೀತಾ ಅರ‌್ಮುಗಂ, ಸುನೀತ ಕದರೇಷನ್, ಮಹದೇವು, ರೈತಸಂಘ-ಕಾಂಗ್ರೆಸ್ ಸದಸ್ಯ ಪಾರ್ಥ, ಉಮಾಶಂಕರ್, ಧನಲಕ್ಷ್ಮಿ ಶ್ರೀನಿವಾಸ್, ಜಯಲಕ್ಷ್ಮಮ್ಮ, ನಾಮ ನಿರ್ದೇಶಿತ ಸದಸ್ಯರಾದ ಲಾಯರ್ ಮುರುಳೀಧರ್, ಎಸ್.ರಮೇಶ್, ಎನ್.ಲಕ್ಷ್ಮೇಗೌಡ ಇತರರು ಇದ್ದರು.