ಚನ್ನರಾಯಪಟ್ಟಣ: 2024-25ನೇ ಸಾಲಿನಲ್ಲಿ ವಾಡಿಕೆಗಿಂತ ಹೆಚ್ಚು ಸುರಿದ ಮಳೆಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆ, ಚರಂಡಿ ಕಾಮಗಾರಿಗಳನ್ನು ದುರಸ್ತಿಪಡಿಸಲು ಒಂದು ಬಾರಿ ಅಭಿವೃದ್ಧಿ ಯೋಜನೆ ಕಾರ್ಯಕ್ರಮದಡಿ ಚನ್ನರಾಯಪಟ್ಟಣ ತಾಲೂಕು ವ್ಯಾಪ್ತಿಯ ರಸ್ತೆ ಅಭಿವೃದ್ಧಿಗಾಗಿ ಸರ್ಕಾರದಿಂದ 15 ಕೋಟಿ ರೂ. ಅನುದಾನ ದೊರೆತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಮುಂಭಾಗ ಬುಧವಾರ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅನುದಾನದಲ್ಲಿ ಗುರುಭವನದಿಂದ ಹೇಮಾವತಿ ಚಾನೆಲ್ ವರೆಗಿನ 2.5 ಕಿ.ಮೀ. ರಸ್ತೆಯನ್ನು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮಹಾಮಸ್ತಕಾಭಿಷೇಕದ ಸಮಯದಲ್ಲಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಿದ್ದು, ಎಂಟು ವರ್ಷಗಳಾಗಿರುವುದರಿಂದ ರಸ್ತೆ ಬಿರುಕು ಬಿಟ್ಟಿದ್ದು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಸ್ತೆ ಸಂಪೂರ್ಣ ಹಾಳಾಗುವ ಮುಂಚೆಯೇ ಅಭಿವೃದ್ಧಿಪಡಿಸಿದರೆ ಮರು ನಿರ್ಮಾಣ ಮಾಡುವ ಅವಶ್ಯಕತೆ ಇರುವುದಿಲ್ಲ. ಈ ಕಾಮಗಾರಿಯಲ್ಲೇ ನಗರ ವ್ಯಾಪ್ತಿಯಲ್ಲಿ ಮುಖ್ಯ ರಸ್ತೆಗೆ ಸಂಪರ್ಕಿಸುವ ರಸ್ತೆಗಳನ್ನು ಸಹ ಅಭಿವೃದ್ಧಿಪಡಿಸಲಾಗುವುದು ಎಂದರು.
40 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಬೆಂಗಳೂರು ಮುಖ್ಯರಸ್ತೆಯಿಂದ ಖಬರಸ್ಥಾನ ಮುಖಾಂತರ ಗದ್ದೆ ಬಿಂಡೆನಹಳ್ಳಿಗೆ ಸಂಪರ್ಕಿಸುವ ರಸ್ತೆಯನ್ನು ಪುರಸಭೆಯ ಅನುದಾನದಲ್ಲಿ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಪುರಸಭೆಯ ತೆರಿಗೆ ಸಂಗ್ರಹದ ಆಧಾರದ ಮೇಲೆ 5 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಆಸ್ಪತ್ರೆ ವೃತ್ತದಿಂದ ಮಾರೇನಹಳ್ಳಿವರೆಗೆ 10 ಕೋಟಿ ರೂ. ಅನುದಾನ ಮಂಜೂರಾಗಿದ್ದು ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ನಿಗದಿಯಾದ ಅನುದಾನಗಳನ್ನು ನಗರಾಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದು, ಹೆಚ್ಚಿನ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗುವುದು. ಕಾಮಗಾರಿ ನಿಗದಿತ ಸಮಯಕ್ಕೆ ಮುಗಿಸಬೇಕು ಮತ್ತು ಗುಣಮಟ್ಟವನ್ನು ಕಾಪಾಡಬೇಕೆಂದು ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದರು.
ಪುರಸಭಾ ಅಧ್ಯಕ್ಷ ಸಿ.ಎನ್.ಮೋಹನ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಆರ್.ಸುರೇಶ್, ಪಿಡಬ್ಲ್ಯುಡಿ ಇಂಜಿನಿಯರ್ ರುಕ್ಮಿಣಿ, ಗುತ್ತಿಗೆದಾರ ತಿಮ್ಮೇಗೌಡ, ಮುಖಂಡರಾದ ಕೃಷ್ಣ, ರಘು, ರಮೇಶ್ ಇತರರು ಇದ್ದರು.