ಜಿಲ್ಲೆ

ಭೋವಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ: ಶಾಸಕ ಜಿ.ಬಿ.ಜ್ಯೋತಿಗಣೇಶ್

ತುಮಕೂರು: ಭೋವಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂ. ನೀಡುವುದಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ನಗರದ ಜಿಎಸ್‌ಎಸ್ ಭವನದಲ್ಲಿ ಮಹಾನಗರ ಪಾಲಿಕೆಗೆ ಸಮುದಾಯದ ಟಿ.ವಿ.ವಿಶ್ವನಾಥ್ ಅವರನ್ನು ನಾಮನಿರ್ದೇಶಿತರನ್ನಾಗಿ ನೇಮಿಸಿದ ಹಿನ್ನೆಲೆಯಲ್ಲಿ ಭಾರತೀಯ ಭೋವಿ ಪರಿಷತ್ ಶನಿವಾರ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬಿ.ಎಚ್.ರಸ್ತೆಯಲ್ಲಿ ನೀಡಿರುವ ನಿವೇಶನದಲ್ಲಿ ಸಮುದಾಯ ಭವನ ಹಾಗೂ ಹಾಸ್ಟೆಲ್ ನಿರ್ಮಿಸಲು ನೆರವು ನೀಡುವುದಾಗಿ ಭರವಸೆಯಿತ್ತರು.

ಶಿರಾ ತಾಲೂಕು ಮದ್ದನಾಯಕನಹಳ್ಳಿ ಸಮುದಾಯದ ಸಂಘಕ್ಕೆ ಸಿಎಂ ಮಾನ್ಯತೆ ಘೋಷಿಸಿದ್ದು, ಕೊಟ್ಟಿರುವ ಭರವಸೆ ಈಡೇರಿಸುತ್ತಾರೆ ಎಂದರು.

ಸಮುದಾಯದ ಸಂಘಟನೆ ಕೊರತೆಯಿಂದ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದ್ದೇವೆ. ಸಮಾಜ ಇನ್ನಷ್ಟು ಸಂಘಟಿತವಾಗಬೇಕು ಎನ್ನುವ ಮನೋಭಾವ ಎಲ್ಲರಲ್ಲಿಯೂ ಬಂದಿದೆ. ದೇಶದಲ್ಲಿರುವ 7 ಕೋಟಿ ಜನರಲ್ಲಿ ಸಮುದಾಯ ಸರ್ಕಾರದ ಸೌಲಭ್ಯ ಪಡೆದುಕೊಂಡಿದೆ ಎಂದು ಭಾರತೀಯ ಭೋವಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಡಾ.ಎಚ್.ರವಿ ಮಾಕಳಿ ಹೇಳಿದರು.

ಸಂಘಟನೆ ಬಲವಾದರೆ ಸರ್ಕಾರದಿಂದ ಸೌಲಭ್ಯ ಪಡೆದುಕೊಳ್ಳಬಹುದು. ಪರಿಷತ್ ಪರಿಶ್ರಮದಿಂದ ಭೋವಿ ಅಭಿವೃದ್ಧಿ ನಿಗಮ ಸ್ಥಾಪಿಸಲಾಯಿತು. ಆದರೆ, ಈವರೆಗೂ ಅಧ್ಯಕ್ಷರನ್ನು ನೇಮಿಸಿಲ್ಲ. ಮುಂದೆ ಮಾಡಬಹುದೆಂಬ ನಿರೀಕ್ಷೆಯಿದ್ದು ಅರವಿಂದ ಲಿಂಬಾವಳಿ ಅವರು ಸಮುದಾಯದ ಅಭಿವೃದ್ಧಿಗಾಗಿ ಅಧ್ಯಕ್ಷರ ನೇಮಕಕ್ಕೆ ಶ್ರಮಿಸಲಿದ್ದಾರೆ ಎಂದರು.

ಭೋವಿ ಸಮುದಾಯಕ್ಕೆ ಬಿಜೆಪಿಯಲ್ಲಿ ಪ್ರಾತಿನಿಧ್ಯ ನೀಡಲಾಗುತ್ತಿದೆ. ಸಣ್ಣ ಸಮುದಾಯದವರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ ದೊರಕುತ್ತಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಓಂಕಾರ್ ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಉಮೇಶ್, ಪುಟ್ಟರಾಜು, ಪಾಲಿಕೆ ನಾಮಿನಿ ಸದಸ್ಯ ಟಿ.ವಿ.ವಿಶ್ವನಾಥ್, ಕಾರ್ಪೊರೇಟರ್‌ಗಳಾದ ಎನ್.ಮಂಜುನಾಥ್, ವಿಷ್ಣುವರ್ಧನ್, ಮಾಜಿ ಸದಸ್ಯ ಪಟೇಲ್ ನಾಗರಾಜು, ತಾಪಂ ಸದಸ್ಯ ಶಿವಕುಮಾರ್, ಶ್ರೀನಿವಾಸ್, ರಾಮಾಂಜಿನಪ್ಪ, ಪರಮಶಿವಯ್ಯ ಇದ್ದರು.

ಸಮಾಜದ ಅಭಿವೃದ್ಧಿಗೆ ರಾಜಕೀಯ ಪ್ರಾತಿನಿಧ್ಯದ ಅಗತ್ಯವಿದೆ. ಆ ಕಾರಣಕ್ಕೆ ನಾವೆಲ್ಲ ಒಗ್ಗಟ್ಟಾಗದಿದ್ದರೆ ರಾಜಕೀಯವಾಗಿ ನಮಗೆ ಪ್ರಾತಿನಿಧ್ಯ ಸಿಗುವುದು ಕಷ್ಟ. ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡೋಣ. ಎಚ್.ಆನಂದಪ್ಪ ಭಾರತೀಯ ಭೋವಿ ಪರಿಷತ್ ರಾಜ್ಯಾಧ್ಯಕ್ಷ