ಚಿಕ್ಕಮಗಳೂರು: ನಗರದ ರಸ್ತೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಲಾಗಿದೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ. ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈಗಾಗಲೇ 2019ರ ಸೆ.7ರಂದು ನಗರದ ರಸ್ತೆಗಳ ಅಭಿವೃದ್ಧಿಗೆ 6 ಕೋಟಿ ರೂ. ವಿಶೇಷ ಅನುದಾನ ಹಾಗೂ ಇದೀಗ 5 ಕೋಟಿ ರೂ.ಗಳು ಸೇರಿ ಒಟ್ಟು 11 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
ಖುದ್ದು ಸಿಎಂ ಭೇಟಿ ಮಾಡಿ ಮನವರಿಕೆ:
ನಗರದಲ್ಲಿ ಒಳಚರಂಡಿ ಹಾಗೂ ಅಮೃತ್ ಯೋಜನೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಬಗ್ಗೆ ಮುಖ್ಯಮಂತ್ರಿಯವರನ್ನು ಖುದ್ದಾಗಿ ಭೇಟಿ ಮಾಡಿ ಹೆಚ್ಚಿನ ಅನುದಾನ ಮಂಜೂರು ಮಾಡುವಂತೆ ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ನಗರದ ರಸ್ತೆ ಮತ್ತಿತರ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶನಿವಾರ 10 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ. ಈ ಅನುದಾನಕ್ಕೆ ತಕ್ಷಣ ಕ್ರಿಯಾಯೋಜನೆ ತಯಾರಿಸಿ ಕಾಮಗಾರಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.