ಸಾಂದರ್ಭಿಕ ಚಿತ್ರ 
ಜಿಲ್ಲೆ

1.5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ ದರೋಡೆ ಪ್ರಕರಣ

ವಿಜಯವಾಣಿ ಸುದ್ದಿಜಾಲ ಮಂಗಳೂರು

ಚಿನ್ನದಂಗಡಿಯ ಕೆಲಸಗಾರನನ್ನು ಅಪಹರಿಸಿ 1.5 ಕೋಟಿ ರೂ. ಮೌಲ್ಯದ 1650 ಗ್ರಾಂ ಅಧಿಕ ಚಿನ್ನದ ಗಟ್ಟಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಮಂಗಳೂರು ಉತ್ತರ ಠಾಣೆ ಹಾಗೂ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಉಳ್ಳಾಲ ಕೆ.ಸಿ.ರೋಡ್ ನಿವಾಸಿ ಫಾರಿಶ್(18), ಮುಕ್ಕಚ್ಚೇರಿಯ ಸಫ್ವಾನ್(23), ಉಳ್ಳಾಲ ಮಾಸ್ತಿಕಟ್ಟೆಯ ಅರಾಫತ್ ಆಲಿ(18), ಉಳ್ಳಾಲದ ಫರಾಝ್(19) ಹಾಗೂ ಅಪ್ರಾಪ್ತ ವಯಸ್ಸಿನ ಬಾಲಕ ಬಂಧಿತರು.

ಘಟನೆ ವಿವರ

ಸೆ.26ರಂದು ಚಾಯ್ಸ ಗೋಲ್ಡ್ ಚಿನ್ನಾಭರಣ ಅಂಗಡಿಯ ಕೆಲಸಗಾರ ಮುಸ್ತಾಫಾ ಎಂಬುವರು ರಾತ್ರಿ ಸುಮಾರು 8.45ಕ್ಕೆ ಸ್ಕೂಟರ್‌ನಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡು ಹೋಗುತ್ತಿದ್ದಾಗ ನಗರದ ಕಾರ್‌ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಅರಾಫತ್ ಆಲಿ ಹಾಗೂ ಫರಾಝ್ ಸ್ಕೂಟರ್‌ನಲ್ಲಿ ಬಂದು ಅಡ್ಡಗಟ್ಟಿದ್ದಾರೆ. ಉಳಿದ ಆರೋಪಿಗಳು ಕಾರಿನಲ್ಲಿ ಬಂದು ಮುಸ್ತಾಫ ಅವರನ್ನು ಕಾರಿನಲ್ಲಿ ಅಪಹರಿಸಿ, ಹಲ್ಲೆಗೈದು ನಗರದ ಹೊರವಲಯದ ಎಕ್ಕೂರಿನಲ್ಲಿ ಇಳಿಸಿ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲಕನೇ ಸೂತ್ರಧಾರ

ಅಪ್ರಾಪ್ತ ವಯಸ್ಸಿನ ಬಾಲಕನೇ ಇಡೀ ಪ್ರಕರಣದ ಸೂತ್ರಧಾರ. ಈತ ಮುಸ್ತಾಫ ಕೆಲಸಕ್ಕಿದ್ದ ಹಂಪನಕಟ್ಟೆಯಲ್ಲಿರುವ ಚಾಯ್ಸ ಗೋಲ್ಡ್ ಅಂಗಡಿಯಲ್ಲೇ ಕೆಲಸ ಮಾಡಿಕೊಂಡಿದ್ದನು. ಮುಸ್ತಾಫ ಚಿನ್ನದ ಗಟ್ಟಿಯನ್ನು ರಾತ್ರಿ 8.30ಕ್ಕೆ ತೆಗೆದುಕೊಂಡು ಹೋಗುವ ಸಂದರ್ಭ ಅವರ ಚಲನವಲನದ ಮಾಹಿತಿಯನ್ನು ಈತ ಆರೋಪಿ ಫಾರಿಶ್(ಈತನೂ ಹಿಂದೆ ಇದೇ ಅಂಗಡಿಯಲ್ಲಿ ಕೆಲಸಕ್ಕಿದ್ದ)ನಿಗೆ ನೀಡಿದ್ದಾನೆ. ಅದರಂತೆ ಎಲ್ಲ ಆರೋಪಿಗಳು ಸೇರಿ ಚಿನ್ನದ ಗಟ್ಟಿ ದರೋಡೆ ಮಾಡಲು ಸಂಚು ರೂಪಿಸಿದ್ದಾರೆ. ಆರೋಪಿ ಸಫ್ವಾನ್ ಎಂಬಾತ ಕೃತ್ಯಕ್ಕೆ ಕಾರನ್ನು ಒದಗಿಸಿದ್ದನು.

ಪ್ರಕರಣದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ. ಕಾರು ಮತ್ತು ಇತರ ಸೊತ್ತನ್ನು ವಶಪಡಿಸಿಕೊಳ್ಳಬೇಕಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ತಿಳಿಸಿದ್ದಾರೆ.