ಬೆಂಗಳೂರು: ರಾಜ್ಯದಲ್ಲೀಗ ಉಪ ಚುನಾವಣೆ ಸಮರ ಕಾವೇರಿದೆ. ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈ ಎರಡೂ ಕ್ಷೇತ್ರಗಳನ್ನು ಶತಾಯಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ರಾಜ್ಯ ಕಾಂಗ್ರೆಸ್ ಮುಖಂಡರು ಸೂಕ್ತ ಅಭ್ಯರ್ಥಿ ಆಯ್ಕೆಗೆ ತಿಂಗಳಿಂದ ಕಸರತ್ತು ನಡೆಸಿದ್ದರು. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ ಅಳೆದು ತೂಗಿ ಪ್ರತಿ ಕ್ಷೇತ್ರಕ್ಕೂ ತಲಾ ಓರ್ವ ಅಭ್ಯರ್ಥಿಯ ಹೆಸರನ್ನಷ್ಟೇ ಅಂತಿಮ ಮಾಡಿದ್ದಾರೆ.
ಮಗಳು ಕುಸುಮಾರನ್ನು ಕಾಂಗ್ರೆಸ್ನಿಂದ ಕಣಕ್ಕಿಳಿಸುವಲ್ಲಿ ತಂದೆ ಹನುಮಂತರಾಯಪ್ಪರ ಕಸರತ್ತು ಬಹುತೇಕ ಯಶಸ್ವಿಯಾಗಿದೆ. ಭಾನುವಾರ ಬೆಳಗ್ಗೆಯಷ್ಟೇ ತಂದೆ ಸಮ್ಮುಖದಲ್ಲಿ ಕುಸುಮಾ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಆರ್ಆರ್ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಕುಸುಮಾ, ಮಾಗಡಿ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿದಂತೆ ಏಳು ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಕೊನೆಗೆ ಕುಸುಮಾರ ಹೆಸರನ್ನು ಅಂತಿಮ ಮಾಡಲಾಗಿದೆ.