ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಪೊಲೀಸ್ ಇನ್ಸ್ಪೆಕ್ಟರ್ರನ್ನು ವರ್ಗಾವಣೆ ಮಾಡಲಾಗಿದೆ.
ಆರ್ಆರ್ ನಗರ ಠಾಣೆಯ ಇನ್ಸ್ಪೆಕ್ಟರ್ ನವೀನ್ ಸುಪೇಕರ್. ವಿ ಅವರನ್ನು ರಾಜ್ಯ ಗುಪ್ತವಾರ್ತೆ ಇಲಾಖೆಗೆ ವರ್ಗಾವಣೆ ಮಾಡಿ ಡಿಜಿ & ಐಜಿಪಿ ಶನಿವಾರ ಆದೇಶ ಹೊರಡಿಸಿದೆ.
ನಾಮಪತ್ರ ಸಲ್ಲಿಕೆ ವೇಳೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆಗಿದೆ ಎಂದು ಕುಸುಮಾ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರ ಕಾರು ಚಾಲಕನ ವಿರುದ್ಧ ಇನ್ಸ್ಪೆಕ್ಟರ್ ನವೀನ್ ಎಫ್ಐಆರ್ ದಾಖಲಿಸಿದ್ದರು.
ನಾಮಪತ್ರ ಸಲ್ಲಿಸುವ ಕಚೇರಿಯ 100 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಬ್ಯಾರಿಕೇಡ್ ತೆಗೆದು ಕಾರುಗಳನ್ನು ನೂರು ಮೀಟರ್ ವ್ಯಾಪ್ತಿಯೊಳಗೆ ತೆಗೆದುಕೊಂಡು ಹೋದ ಆರೋಪದಡಿಯಲ್ಲಿ ಕೇಸು ದಾಖಲಿಸಲಾಗಿತ್ತು.
ಇದೀಗ ಇನ್ಸ್ಪೆಕ್ಟರ್ ನವೀನ್ರನ್ನು ವರ್ಗಾವಣೆ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ನಮ್ಮ ಪಕ್ಷದವರಿಗೆ ವಿನಾಕಾರಣ ತೊಂದರೆ ಕೊಟ್ಟರೆ ಅಂಥ ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುತ್ತೇನೆಂದು ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಎಚ್ಚರಿಕೆ ನೀಡಿದ್ದರು. ಇದೀಗ ವರ್ಗಾವಣೆ ಆಗಿರುವುದು ಕಾಕತಾಳಿಯವೋ? ಅಥವಾ ಉದ್ದೇಶಪೂರ್ವಕವೋ? ಎಂದು ಚರ್ಚೆಯಾಗುತ್ತಿದೆ.