ಜಿಲ್ಲೆ

ಆರ್​ಪಿಎಫ್ ಸಿಬ್ಬಂದಿ ಬೈಕ್ ರ್ಯಾಲಿಗೆ ಚಾಲನೆ

ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರೈಲ್ವೆ ಸುರಕ್ಷಾ ದಳದ (ಆರ್​ಪಿಎಫ್) ಸಿಬ್ಬಂದಿ ಆಯೋಜಿಸಿರುವ ಬೈಕ್ ರ್ಯಾಲಿಗೆ ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ನೈಋತ್ಯ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ ಅವರು ಸೋಮವಾರ ಚಾಲನೆ ನೀಡಿದರು.
ವಲಯದ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳಿಂದ ತಲಾ ಐದು ಬೈಕ್​ಗಳೊಂದಿಗೆ ಒಟ್ಟು 15 ಬೈಕ್​ಗಳಲ್ಲಿ 30 ಜನ ಆರ್​ಪಿಎಫ್ ಸಿಬ್ಬಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬೈಕ್ ರ‍್ಯಾಲಿ ಸಿಕಂದರಾಬಾದ್​ಗೆ ತೆರಳಿತು. ಸಿಕಂದರಾಬಾದ್​ನಲ್ಲಿ ಇನ್ನಿತರ ವಲಯಗಳ ಬೈಕ್ ಸವಾರರೊಂದಿಗೆ ರ‍್ಯಾಲಿ ಮುಂದುವರಿಯುತ್ತದೆ. ಆ. 14ಕ್ಕೆ ಈ ಬೈಕ್ ರ‍್ಯಾಲಿ ದೆಹಲಿ ತಲುಪಲಿದೆ.
ನೈಋತ್ಯ ರೈಲ್ವ ವಲಯದ ಆರ್​ಪಿಎಫ್ ಬೈಕ್ ಸವಾರರು ವಲಯ ವ್ಯಾಪ್ತಿಯ 75 ನಿಲ್ದಾಣಗಳಲ್ಲಿ ರಾಷ್ಟ್ರ ಭಕ್ತಿಯ ಜಾಗೃತಿ ಮೂಡಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಾದ ಧಾರವಾಡದ ನಿಂಗಯ್ಯ ಸಿಸಂಬರಿಮಠ ಹಾಗೂ ಬಸಪ್ಪ ಮಡಿವಾಳರ, ರಾಷ್ಟ್ರಪತಿ ಅವರಿಂದ ಪೊಲೀಸ್ ಪದಕ ಪಡೆದ ಆರ್​ಪಿಎಫ್​ನ ನಿವೃತ್ತ ಅಧಿಕಾರಿಗಳಾದ ಐ.ಎಚ್. ಹಂದ್ರಾಳ ಹಾಗೂ ಶಾಜಿ ಮ್ಯಾಥ್ಯೂ ಅವರನ್ನು ಸನ್ಮಾನಿಸಲಾಯಿತು. ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಐಜಿ ಅಲೋಕ ಕುಮಾರ, ಹುಬ್ಬಳ್ಳಿ ರೈಲ್ವೆ
ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಹಾಗೂ ಇತರರು ಇದ್ದರು