ಜಿಲ್ಲೆ

ಸುರಕ್ಷತೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ

Dharwada - Santosh Vaidya

ಹುಬ್ಬಳ್ಳಿ: ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಅಳವಡಿಸಿಕೊಳ್ಳುವ ಮೂಲಕ ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಗಮನ ಹರಿಸಬೇಕು ಎಂದು ರೈಲ್ವೆ ಸುರಕ್ಷಾ ಪಡೆ (ಆರ್​ಪಿಎಫ್)ಯ ಮಹಾ ನಿರ್ದೇಶಕ ಮನೋಜ ಯಾದವ ಕರೆ ನೀಡಿದರು.

ಗದಗ ರಸ್ತೆಯಲ್ಲಿರುವ ರೈಲ್ ಸೌಧದಲ್ಲಿ ಆರ್​ಪಿಎಫ್ ಸಿಬ್ಬಂದಿಗೆ ಆಯೋಜಿಸಿದ್ದ ಸುರಕ್ಷಾ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸಿಬ್ಬಂದಿ ಕೊರತೆಯಿಂದ ಎದುರಾಗುವ ಸಮಸ್ಯೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಸರಿದೂಗಿಸಿಕೊಳ್ಳಬಹುದು. ಆರ್​ಪಿಎಫ್ ಸಿಬ್ಬಂದಿ ಪ್ರಯಾಣಿಕರ ಒಳಿತಿಗಾಗಿ ಹೆಚ್ಚಿನ ಪರಿಶ್ರಮ ವಹಿಸುವ ಮೂಲಕ ರೈಲ್ವೆಯ ವರ್ಚಸ್ಸು ವೃದ್ಧಿಸಲು ಪ್ರಯತ್ನಿಸಬೇಕು ಎಂದರು.

ಆರ್​ಪಿಎಫ್ ಐಜಿ ಆರ್.ಎಸ್.ಪಿ. ಸಿಂಗ್, ಮುಖ್ಯ ಸುರಕ್ಷಾ ಆಯುಕ್ತ ವಿಜಯಕುಮಾರ ಕೆ., ವಿಭಾಗೀಯ ಸುರಕ್ಷಾ ಆಯುಕ್ತ ಜೆ.ಕೆ. ಶರ್ಮಾ ಪಾಲ್ಗೊಂಡಿದ್ದರು.

ನೈಋತ್ಯ ರೈಲ್ವೆ ಮಹಾಪ್ರಬಂಧಕ ಸಂಜೀವ ಕಿಶೋರ ಅವರು ವಿವಿಧ ವಿಭಾಗಗಳ ಮುಖ್ಯಸ್ಥರೊಂದಿಗೆ ರೈಲ್ವೆ ಸುರಕ್ಷತೆ ಹಾಗೂ ಸಂಬಂಧಿತ ಯೋಜನೆಗಳ ಕುರಿತು ವಿವರಿಸಿದರು.

ಪ್ರಮುಖ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕಳೆದ ವರ್ಷ 16ನೇ ಸ್ಥಾನದಲ್ಲಿದ್ದ ನೈಋತ್ಯ ರೈಲ್ವೆ ಈ ಬಾರಿ (ಮಾರ್ಚ್ 20223) ಪ್ರಥಮ ಸ್ಥಾನ ಪಡೆದಿರುವುದಕ್ಕೆ ಮನೋಜ ಯಾದವ ಪ್ರಶಂಸೆ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವ ಮನೋಜ ಯಾದವ ಅವರು, 71 ಲಕ್ಷ ರೂ. ವೆಚ್ಚದಲ್ಲಿ ಗದಗನಲ್ಲಿ ನಿರ್ವಿುಸಿದ ಆರ್​ಪಿಎಫ್ ಬರ್ಯಾಕ್ ಉದ್ಘಾಟಿಸಿದರು.