ಬೆಂಗಳೂರು: ಸಮಾಜದಲ್ಲಿ ಅಧಿಕಾರ ಮತ್ತು ಶ್ರೀಮಂತಿಕೆಯನ್ನು ವಿಜೃಂಭಿಸುತ್ತಿರುವ ಕೆಟ್ಟ ಹವ್ಯಾಸ ಹೋಗಬೇಕಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ ಹೇಳಿದರು.
ನಗರದ ಮತ್ತಿಕೆರೆಯ ರಾಯಲ್ ಕಾಲೇಜಿನ ‘ಮೀಟ್ ಅಂಡ್ ಗ್ರೀಟ್ ವಿಥ್ ಸೆಲಿಬ್ರೆಟಿ’ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದಾಗ ಸಮಾಜ ಚಿಕಿತ್ಸಕ ದೃಷ್ಟಿ ಬೆಳೆಸಿಕೊಳ್ಳುವ ಅಗತ್ಯವಿದೆ. ಇಂದು ದುರಾಸೆ ಎಂಬುದು ರೋಗವಾಗಿ ಬೆಳೆಯುತ್ತಿದೆ. ತೃಪ್ತಿಯ ಗುಣ ಹೊಂದುವುದೊಂದೇ ಅದಕ್ಕಿರುವ ಔಷಧಿ. ಅದಕ್ಕಾಗಿ ಜನರು ಇರುವುದರಲ್ಲೇ ಸಂತೋಷ ಹಾಗೂ ತೃಪ್ತಿಯನ್ನು ಹೊಂದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಹಿರಿಯರು ಕಟ್ಟಿದ ಮೌಲ್ಯ, ಮಾನವೀಯತೆಯನ್ನು ಬೆಳೆಸಕೊಳ್ಳದ ಹೊರತಾಗಿ ಉತ್ತಮ ಸಮಾಜ ಸಾಧ್ಯವಿಲ್ಲ. ಹಾಗಾಗಿ ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ ಇಂದಿನ ಯುವಕರ ಮೇಲಿದೆ ಎಂದ ಅವರು, ಮೌಲ್ಯಯುತ ಅಂಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನ ನಡೆಸುವುದರ ಜೊತೆಗೆ ಉತ್ತಮ ಸಮಾಜ ನಿರ್ಮಾಣ ಮಾಡಿರಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾವಿಹಾರ ಶಾಲೆಯ ಮುಖ್ಯ ಶಿಕ್ಷಕಿ ರಶ್ಮಿ ಶೆಟ್ಟಿ, ಎಲ್. ಸಿ. ಆರ್. ಶಾಲೆಯ ಮುಖ್ಯ ಶಿಕ್ಷಕಿ ಶ್ವೇತಾ ರಾಜ್, ಹಿರಿಯ ಶಿಕ್ಷಕಿ ಡಿ.ಸಿ ಯಶೋಧಾ ಅವರಿಗೆ ಗುರು ಗೌರವ ಪುರಸ್ಕಾರ ನೀಡಲಾಯಿತು. ಸಂಸ್ಥೆಯ ಅಧ್ಯಕ್ಷ ಡಾ. ಬಿ.ಕೆ. ದೇವರಾಜ್, ಕಾಲೇಜಿನ ಪ್ರಾಚಾರ್ಯ ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ, ಸಂಸ್ಥೆಯ ನಿರ್ದೇಶಕಿ ಸುಜಾತ ದೇವರಾಜ್ ಇತರರು ಉಪಸ್ಥಿತರಿದ್ದರು.